Friday, 24 February 2012

ಕೊಳೆತ ಕನಸುಗಳು

ಬಣ್ಣದ ಕನಸುಗಳೇ ಯಾಕೆ ನೀವು ಹೀಗೆ
ಎಲ್ಲರಲ್ಲೂ, ಎಲ್ಲೆಲ್ಲು ನೀವೇ ಯಾಕೆ ಹೀಗೆ

ಬದುಕ ಮೂಟೆ ತುಂಬಾ ಬಣ್ಣ ಬಣ್ಣದ ಕನಸುಗಳು
ಕೆಲವು ನನಸಾಗದೆ ಉಳಿದು ಕೊಳೆತು ನಾರುವವುಗಳು

ಕಲ್ಲು ಮುಳ್ಳುಗಳ ಹಾದಿಯಲ್ಲಿ ಬಳಲಿದೆ ಜೀವ
ಕಾಡುವ ಕನಸುಗಳ ಮೂಟೆ ಹೊತ್ತ ಜೀವ

ಹೊತ್ತು ಸಾಗುವ ಮನಸ್ಸು ಹುಡುಕುತ್ತಿದೆ ಕಂಗಾಲಾಗಿ
ಆಯಾಸ ಪರಿಹರಿಸೋ ಪ್ರೀತಿಯ ತೊರೆಗಾಗಿ

ಮುಟೆಯಲ್ಲಿ ಬಂಧಿಗೊಂಡ ಕಸಸುಗಳು ಕಿತ್ತಾಡುತ್ತಿವೆ
ತಾನೆ ಮೊದಲು ನನಸಾಗಬೇಕೆಂದು ಒದ್ದಾಡುತ್ತಿವೆ

ಅಸ್ಪೋಟಿಸುತ್ತಿವೆ ಬಹುದಿನಗಳ ಕನಸುಗಳು
ಕಾದೂ ಕಾದು ಸೋತ ಬೆಂಡಾದ ಬಯಕೆಗಳು

ಮನಸ್ಸ ಸುತ್ತ ಹರಡಿದೆ ದಟ್ಟ ಕಪ್ಪು ಹೊಗೆ
ಬಹುದಿನದ ಕನಸು ಜೀವಂತ ಸತ್ತ ಬಗೆಗೆ

ಬದುಕೇ ಹೀಗೆ ಹಲವು ಕನಸ ಅಗರ
ನನಸಾಗದೆ ಉಳಿದವುಗಳ ಸಾಗರ

ಕನಸಲ್ಲೇ ಬದುಕಕುವ ಜೀವನ ಸಾಕು
ಬದುಕನ್ನು ಕನಸಂತೆ ಅನುಭವಿಸಿದರೆ ಸಾಕು







 









 


Sunday, 1 January 2012

ಸಮಾಗಮ

ಸಮಾಗಮಕ್ಕಾಗಿ ಕಾದಿದೆ ಮನಸ್ಸು
ಬಹುದಿನದ ವಿರಹ ಮೂಟೆಯ ಹೊತ್ತು
ವಯಸ್ಸು ತಂದಿದೆ ಹಲವು ಕನಸು
ಕಳೆದರೂ ಕಳೆಯದಾಗಿದೆ ಅಪೂರ್ವ ಹೊತ್ತು

ಜೋಡಿ ಹೃದಯದಲ್ಲಿ ಸುರಿಯುತ್ತಿದೆ ಪ್ರೀತಿ
ಸಂಯಮದ ಕಟ್ಟೆಯೊಡೆದು ಹರಿಯುವಷ್ಟು
ಹೊರಟಿದೆ ಜೋಡಿ ಹಕ್ಕಿ ದಾಟಿ ರೀತಿ ನೀತಿ
ಮುಗಿಲು, ನಕ್ಷತ್ರ, ಚುಕ್ಕಿ ಮುಟ್ಟುವಷ್ಟು

ಬಾನ ಶ್ವೇತ ಮೋಡಗಳ ನಡುವೆ
ನಡೆದಿದೆ ಶುಭ ಸಮ್ಮಿಲನ
ಮೊಗದ ತುಂಬಾ ಸಿಹಿ ನಗುವೆ
ಬದುಕ ಸಾರ್ಥಕತೆಯ ನಮನ

ಕಾದು ಕಾಲು ಸೋತ ಮನವಿಂದು
ಸ್ವರ್ಗ ಸುಖದ ಭಾವದೊಂದಿಗೆ
ಬದುಕಿದ್ದಾಗ ಸೇರದ ಹೃದಯಗಳಿಂದು
ಇಹವ ಮರೆತ ನಗುವ ಲೋಕದೊಂದಿಗೆ








ಹೂವೊಂದು ನಗುವಂತಿದೆ

ಹೂವೊಂದು ನಗುವಂತಿದೆ
ಮುಗಿಲ ರವಿಕಿರಣವ ನೋಡಿ
ಗಿಡವೊಂದು ಅಳುವಂತಿದೆ
ಬುಡಕ್ಕೆ ಹತ್ತಿರುವ ಹುಳುವ ನೋಡಿ

ತಾಯೊಂದು ಕಣ್ಣೀರಿಡುವಂತಿದೆ
ಇಹವ ತೊರೆದ ಮಗುವ ನೆನೆದು
ಕೂಸೊಂದು ಕುಣಿವಂತಿದೆ
ಅಮ್ಮನಪ್ಪುಗೆಯ ಬಿಸಿಯನ್ನು ನೆನೆದು

ನದಿಯೊಂದು ಮಾರ್ದನಿಸುವಂತಿದೆ
ಅಗಾಧ ಕಡಲಲ್ಲಿ ಲೀನವಾಗುವ ಕುರಿತು
ಕಡಲೊಂದು ಮೊರೆವಂತಿದೆ
ನನ್ನೊಳಗೆ ಸತ್ತ ನದಿಗಳ ಕುರಿತು

ದನವೊಂದು ಗೊಗರೆವಂತಿದೆ
ಹಾಲ ಹಿಂಡುವ ಮಾನವನ ತಿವಿದು
ಕರುವೊಂದು ಜಿಗಿವಂತಿದೆ
ಕೆಚ್ಚಲು ಹಾಲ ಸಿಹಿ ನೆನೆದು

ಬದುಕೊಂದು ಗಹಗಹಿಸುವಂತಿದೆ
ಕಳೆದು ಅಳುವವರ ನೋಡಿ
ಮನುಷ್ಯನೊಬ್ಬ ಮರುಗುವಂತಿದೆ
ಕೈಯಲ್ಲಿದ್ದ ಬದುಕ ಕಳೆದವರ ನೋಡಿ.





















Wednesday, 28 December 2011

ಕಡಿಮೆ ಧಾರ್ಮಿಕತೆ ನಮ್ಮನ್ನು ಅಧರ್ಮಿಯಾನ್ನಾಗಿಸುವುದೇ..?

ಧರ್ಮ ನಮಗೆಲ್ಲರಿಗೂ ಗುರುತಿನ ಚೀಟಿ ಇದ್ದಂತೆ. ಆತ ಹಿಂದೂ, ಇತ ಮುಸಲ್ಮಾನ, ಆಕೆ ಕ್ರಿಶ್ಚಿಯನ್ ಹೀಗೆ ಇಂದು ಧರ್ಮ ನಮ್ಮ ಐಡೆಂಟಿಟಿಯಾಗಿದೆ. ಧರ್ಮದ ಪ್ರಾಥಮಿಕ, ಮೂಲಭೂತ ವಿಚಾರಗಳು, ವಿಧಿ-ವಿಧಾನಗಳು ಎಂದೋ ತುಕ್ಕು ಹಿಡಿದು ನಮ್ಮಿಂದ ದೂರವಾಗಿದೆ. ಧರ್ಮ ಕೇವಲ ಗುರುತು ಮತ್ತು ಕಲಹವೆಬ್ಬಿಸಲು ಮಾತ್ರ ಉಪಯೋಗಿಸಲ್ಪಡುವ ವಸ್ತುವೆಂಬುದಾಗಿ ಅರ್ಥೈಸಿಕೊಂಡ ಜನರು ಸಮಾಜದಲ್ಲಿ ರಾಡಿ ಎಬ್ಬಿಸಲು ಶುರುವಾಗಿ ದಶಕಗಳೇ ಕಳೆದಿವೆ. 

ಸಂಘರ್ಷ ಮತ್ತು ಧರ್ಮಗಳೆರಡನ್ನು ನೋಡುವ ದೃಷ್ಟಿಕೋನಗಳು ಅನೇಕವಿದೆ. ಅವುಗಳಲ್ಲೆರಡು ಪ್ರಮುಖವಾದುದು. ಧರ್ಮವನ್ನು ಕೋಳಿ ಎಂದು ಮತ್ತು ಸಂಘರ್ಷ ಅ ಕೋಳಿಯ ಮೊಟ್ಟೆ ಎಂದು ಕಾಣುವ ಇಂದಿನ ಕ್ರಾಂತಿಕಾರಿ ದೃಷ್ಟಿಕೋನ ಮತ್ತು ಸಂಘರ್ಷವನ್ನು ರೋಗ ಮತ್ತು ಧರ್ಮ ಅದನ್ನು ಗುಣಪಡಿಸುವ ಮದ್ದು ಎಂದು ಪರಿಗಣಿಸುವ ಕಲಹಗಳಿಂದಾಗುವ ನಷ್ಟದ ಬಗ್ಗೆ ತಲೆಕೆಡಿಸಿಕೊಂಡವರ ದೃಷ್ಟಿಕೋನ. ಯಾವತ್ತು ಧರ್ಮದಿಂದ ಪರಸ್ಪರ ಅಥವಾ ಅನ್ಯಧರ್ಮಿಯರ ಮಧ್ಯ ಸಂಘರ್ಷಗಳು ಏರ್ಪಡುವುದಿಲ್ಲ ಬದಲಾಗಿ ರ್ಮದ ದುರುಪಯೋಗ ಅಥವಾ ಧರ್ಮವನ್ನು ತಪಾಗಿ ಅರ್ಥೈಸಿಕೊಂಡವರ ಪರಿಣಾಮ ಮಾತ್ರ ನಮ್ಮ ಯುವಕರನ್ನು ಸಂಘರ್ಷದತ್ತ ತಳ್ಳುತ್ತದೆ. 

ಒಂದೆರಡು ವಿಚಾರಗಳು ನಾನಿಲ್ಲಿ ಪ್ರಸ್ತಾಪಿಸುವುದು ನಮ್ಮ ಧಾರ್ಮಿಕತೆಗೆ ಸಂಬಂಧಪಟ್ಟದ್ದು. ಹಿಂದೊಂದು ಕಾಲವಿತ್ತು. ನಮ್ಮ ಪೂರ್ವಿಕರೆಲ್ಲಾ ಅತೀ ಧಾರ್ಮಿಕರಾಗಿದ್ದ ಕಾಲವೊಂದಿತ್ತು. ಪ್ರತೀ ಧರ್ಮದ ಅನುಯಾಯಿಗಳು ತಮ್ಮ ಧರ್ಮದಲ್ಲಿನ ವಿಧಿ-ವಿಧಾನ, ಅಚಾರ-ವಿಚಾರಗಳನ್ನು ತಪ್ಪದೇ ಪಾಲಿಸುತ್ತಿದ್ದ ಕಾಲ. ಧರ್ಮದ ಬಗ್ಗೆ ಆಳವಾಗಿ ಅರಿತುಕೊಂಡು ಹೆಚ್ಚು ಧಾರ್ಮಿಕರಾಗಿ ಬದುಕುತ್ತಿದ್ದ ಕಾಲ. ಆದರೆ ಅನ್ಯ ಧರ್ಮಗಳೊಂದಿಗೆ ಎಂದೂ ಕಾದಾಡಿದವರಲ್ಲ. ಅಕ್ಬರನ ಆಸ್ಥಾನದಲ್ಲಿ ಬೀರಬಲ್ಲನಿಗೆ ಮುಸಲ್ಮಾನರಿಗಿಂತ ಹೆಚ್ಚು ಗೌರವ ಸಿಗುತ್ತಿತು ಎನ್ನುವುದೇ ನಾವು ನೀವು ಓದಿದ ಉದಾಹರಣೆ. 

ಹಾಗಾದರೆ ನಮ್ಮಲ್ಲಿ ಕಡಿಮೆಯಾಗುತ್ತಿರುವ ಧಾರ್ಮಿಕತೆ ನಮ್ಮನ್ನು ಅಧರ್ಮಿಯರನ್ನಾಗಿಸುತ್ತದೆಯೇ.....? ಯೋಚಿಸಬೇಕಾದ ವಿಚಾರ. ನನ್ನ ಪ್ರಕಾರ ಹೌದು. ಇವತ್ತು ಅನ್ಯ ಧರ್ಮಿಯರ ಅಸ್ತಿತ್ವವೇ ನಮ್ಮ ಅವನತಿಯೆಂದು ಭಾವಿಸಿ ಅ ಧರ್ಮದ ನಿರ್ನಾಮವನ್ನು ಬಯಸುವವರು ತಮ್ಮ ಅಥವಾ ತಾವು ಅನುಸರಿಸಬೇಕಾದ ಧರ್ಮದ ಪ್ರಾಥಮಿಕ ಮತ್ತು ಮೂಲಭೂತ ವಿಚಾರಗಳ, ವಿಧಿ-ವಿಧಾನಗಳು, ಬಗ್ಗೆ ಅನಕ್ಷರಸ್ಥರಾಗಿರುತ್ತಾರೆ. ಆದರೆ ತಮ್ಮ ಧರ್ಮದ ಶತ್ರುಗಳೆಂದು ಕಾಣುವ ಅನ್ಯ ಧರ್ಮದ ದೋಷಗಳ ಬಗ್ಗೆ ಬರೆಯಲು, ಹಳಿಯಲು ಒಂದು ಮಹಾ ಪ್ರಬಂಧಕ್ಕಾಗುವಷ್ಟು ಮಾಹಿತಿಗಳಿರುತ್ತವೆ. ಇದು ಧರ್ಮದ ದುರುಪಯೋಗ. ಇದು ತನ್ನದಲ್ಲದ ಇನ್ನೊಂದು ಧರ್ಮದ ಬಗ್ಗೆ ದ್ವೇಷ ದಳ್ಳುರಿಯನ್ನು ಹುಟ್ಟಿಸುವ ಭಾವನೆಗಳು ಇಂದಿನ ಧಾರ್ಮಿಕ ಮುಖಂಡರ ಮತ್ತು ರಾಜಕೀಯ ಶಕ್ತಿಗಳು ನಮ್ಮ ಯುವಕರಿಗೆ ಚಮಚದಲ್ಲಿ ತಿನ್ನಿಸುವ ಜಾಮುನಂತಾಗಿದೆ. ಕೆಲವು ಧಾರ್ಮಿಕ ಮುಖಂಡರುಗಳು ಸರ್ವಧರ್ಮ ಸಮ್ಮೇಳನಗಳ ವೇದಿಕೆಯಲ್ಲೇ ತಮ್ಮ ಧರ್ಮವೇ ಹೆಚ್ಚು ಸಹಿಷ್ಣು ಎನ್ನುವ ಬರದಲ್ಲಿ ತಾವೇ ಅಸಹಿಷ್ಣುಗಳಾಗುವ ಸಂದರ್ಭಗಳು ಹೊಸತೇನಲ್ಲ. 

ಧರ್ಮ ಯಾವತ್ತು, ಯಾರನ್ನು, ನೀನು ಇತರ ಧರ್ಮದ ವಿಚಾರದಲ್ಲಿ ಅಧರ್ಮಿಯಾಗು ಎಂದು ಎಲ್ಲಿಯೂ ಬೋಧಿಸುವುದಿಲ್ಲ. ಜಗತ್ತಿನ ಎಲ್ಲಾ ಧರ್ಮಗಳ ಬೋಧನೆಗಳು ಶಾಂತಿ, ಸಹನೆ, ಅಹಿಂಸೆ, ಪ್ರೀತಿ ಮತ್ತು ಇತರ ಕೆಲವು ಸಮಾಜಮುಖಿಯಾದ ಚಿಂತನೆಗನ್ನಷ್ಟೇ ಹೇಳುತ್ತವೆ. ಯಾವುದೇ ಧಾರ್ಮಿಕ ಕೇಂದ್ರಗಳು ನೀನು ಅನ್ಯಧರ್ಮಿಯರನ್ನು ಹಿಂಸಿಸಿದರೆ ಮಾತ್ರ ನಿನಗೆ ದೇವಾಲಯ, ಮಸೀದಿ, ಚರ್ಚುಗಳಿಗೆ ಪ್ರವೇಶವೆಂಬ ಕಟ್ಟುಪಾಡುಗಳೆನ್ನಿಲ್ಲ. ಹೀಗೆ ಧರ್ಮ ಎಂದು ಸಂಘರ್ಷಕ್ಕೆ ಕಾರಣವಾಗುವುದಿಲ್ಲ. ಒಂದು ವೇಳೆ ಧರ್ಮವೇ ಕಲಹದ ಕಾರಣವಾಗಿದ್ದರೆ ಧರ್ಮದ ಅಸ್ತಿತ್ವದ ಶುರುವಿನಿಂದಲೇ ಸಂಘರ್ಷದ ಬೇಗೆಯಲ್ಲಿ ಬೇಯಬೇಕಿತ್ತು. ಇತಿಹಾಸದ ಪ್ರತಿ ಘಟ್ಟದಲ್ಲಿ ಧರ್ಮಸಂಘರ್ಷದ ಕುರುಹುಗಳು ಸಿಗಬೇಕಿತ್ತು. 

ಧರ್ಮ ನನ್ನ ಪ್ರಕಾರ ತೀರಾ ಖಾಸಗಿ ವಿಚಾರ. ಅವರವರ ವಿಚಾರ, ಆಸಕ್ತಿ, ಭಾವಕ್ಕೆ ಸಂಬಂಧಪಟ್ಟದ್ದು. ಒಂದು ಧರ್ಮದಿಂದ ಇನ್ನೊಂದು ಧರ್ಮಕ್ಕೆ ಮತಾಂತರವಾಗುವ ಇಚ್ಚೆ ಆತನ ವೈಯಕ್ತಿಕತೆಗೆ ಸಂಬಂಧಪಟ್ಟದ್ದಾಗಿರಬೇಕು. ಹೊರತು ಬಲವಂತಕ್ಕೆ ಮಣಿದು, ಆಮಿಷಗಳ ಮೂಲಕ ಅಥವಾ ಬೆದರಿಕೆಗಳಿಗೆ ಬಗ್ಗುವಂತದ್ದಾಗಬಾರದು. ಧರ್ಮದ ಒಳ್ಳೆ ವಿಚಾರಗಳು ಬದುಕಿನ ನಡೆಗೆ ಪೂರಕವಾಗುವವು, ಅವನ್ನು ಬದುಕಿಗೆ ಅಳವಡಿಸಿಕೊಳ್ಳಿ. ಧರ್ಮದ ಬಗ್ಗೆ ಪರಿಪೂರ್ಣ ತಿಳಿದುಕೊಳ್ಳಿ. ಸಾಧ್ಯವಾಗದಿದ್ದರೆ ಧರ್ಮದ ಸಂಘರ್ಷಕ್ಕೆ ಕಾರಣರಾಗಬೇಡಿ. ಧರ್ಮ ದೇವರುಗಳಲ್ಲಿ ನಂಬಿಕೆ ಇರದಿದ್ದರೂ ಮಾನವ ಧರ್ಮದಲ್ಲಿ ವಿಶ್ವಾಸ ಬೆಳೆಸಿಕೊಳ್ಳಿ. ನಾನು ಪಾಲಿಸುವ ಧರ್ಮವು ಅದೇ. ನಮ್ಮ ಧರ್ಮದ ಅಳತೆಗೋಲುಗಳ ಬಣ್ಣ ಕೇಸರಿ, ಹಸಿರು, ಬಿಳಿಗಳಿರಬಹುದು ಆದರೆ ನಮ್ಮ ಮಾನವ ಧರ್ಮದ ಬಣ್ಣ ಕೆಂಪು. ಅದು ನಮ್ಮ ನಿಮ್ಮ ಜೀವ ದ್ರವ ರಕ್ತ. 

- ವಿಘ್ನೇಶ್ ತೆಕ್ಕಾರು

Tuesday, 22 November 2011

ಲೇಖನ - ೧: ಬಡ್ದು ಆಚಾರಿ

                       

ನಮ್ಮ ಮನೆ ಇರುವುದು ಬೆಳ್ತಂಗಡಿ ತಾಲೂಕಿನ ಒಂದು ಸಣ್ಣ ಗ್ರಾಮ ತೆಕ್ಕಾರು. ನಾನು ಹುಟ್ಟಿ ಪದವಿ ಶಿಕ್ಷಣ ಮುಗಿಸುವವರೆಗೂ ಸರಿಯಾಗಿ ಬಸ್ಸುಗಳು ಬಂದು ಹೋದದ್ದಿಲ್ಲ. ಅಂತಹ ಗ್ರಾಮಕ್ಕೆ ಅದರಲ್ಲೂ ನಮ್ಮ ಮನೆಯ ಎಲ್ಲಾ ಮರದ ಕೆಲಸಕ್ಕೆ ನಾನು ಹುಟ್ಟುವುದಕ್ಕೂ ಮೊದಲು ಬರುತಿದ್ದವನೇ ಈ ಬಡ್ದು ಆಚಾರಿ. ಹೆಸರೇಕೆ ಇಷ್ಟು ಕೆಟ್ಟದಾಗಿದೆ ಎಂದುಕೊಳ್ಳಬೇಡಿ..!ಇದು ಆತನಿಗಿದ್ದ ಅನ್ವರ್ಥನಾಮ ಅರ್ಥಾತ್ ಅಡ್ಡ ಹೆಸರು. ಮೂಲ ಹೆಸರು ನಾರಾಯಣ ಆಚಾರಿ, ಆತನ ಕೆಲಸದಲ್ಲಿ ನಯನಾಜೂಕು ಇಲ್ಲದ ಕಾರಣದಿಂದ ತುಳುವಿನ ಬಡ್ದು ನಾರಾಯಣನನ್ನು ಮರೆಮಾಚಿದೆ. ತುಳು ಭಾಷೆಯಲ್ಲಿ ಬಡ್ದು ಎಂದರೆ ಆಲಸ್ಯ ಎಂಬ ಅರ್ಥ ಇರುವುದರಿಂದಲೇ ಜನರ ಬಾಯಲ್ಲಿ ನಾರಾಯಣ ಆಚಾರಿ ಬಡ್ದು ಅಚಾರಿಯಾದ್ದು ಆತನು ಕೆಲಸ ಕೆಡಿಸುತ್ತಿದಷ್ಟೇ ಸಹಜ. ಆತನ ಊರು ಪುಂಜಾಲಕಟ್ಟೆಯ ಪಕ್ಕದ ಯಾವುದೋ ಹಳ್ಳಿಯಂತೆ ಎಂದು ನಾನು ನನ್ನ ತಂದೆಯವರಲ್ಲಿ ಇತ್ತೀಚೆಗಷ್ಟೇ ತಿಳಿದುಕೊಂಡೆ. ನನ್ನ ತಂದೆಯವರೇ ಈ ಅಪರೂಪದ ವ್ಯಕ್ತಿಯ ಕಥೆಯನ್ನು ನನಗೆ ಹೇಳಿದವರು. ಅಷ್ಟು ದೂರದ ಊರಿಂದ ನಮ್ಮೂರಿಗೆ ಕೆಲಸೆದ ನಿಮ್ಮಿತ್ತ ಕಾಲುನಡಿಗೆಯಲ್ಲಿ ಬರುವ ಈ ಮುದುಕ ನಮ್ಮೂರಿನಲ್ಲಿ ಎಲ್ಲೇ ಕೆಲಸವಿದ್ದರೂ ನಮ್ಮ ಮನೆ ಉಳಿದುಕೊಳ್ಳುವ ಅಥಿತಿ ಗೃಹವಿದ್ದಂತೆ ಪುಣ್ಯಾತ್ಮನಿಗೆ. ಧಣಿಗಳೇ ನಾನು ಇವತ್ತು ರಾತ್ರಿ ನಿಮ್ಮ ಮನೆಗೆ ಎಂದು ಹಲ್ಲು ಕಿರಿಯುತ್ತಾ ಬೆಳ್ಳಂಬೆಳಗ್ಗೆ ಪ್ರತ್ಯಕ್ಷವಾಗುವ ಬಡ್ದು ಆಚಾರಿ ಕೆಲಸಮುಗಿಸಿ ಸಂಜೆ ಆರರ ಸುಮಾರಿಗೆ ಮನೆಯ ತಡಮೆ ನುಳಿಕೊಂಡು ಬರುತ್ತಿದ್ದ. ಬಂದವನೇ ಮೊದಲು ಮಾಡುತ್ತಿದ್ದ ಕೆಲಸವೆಂದರೆ ಬಚ್ಚಲುಮನೆಯ ಓಲೆ ತುಂಬಾ ತರಗೆಲೆ ಅಥವಾ ನಮ್ಮ ಮನೆಯಲ್ಲೇ ಕೆಲಸವಾದರೆ ಮರದ ಸಣ್ಣ ಪುಟ್ಟ ಚೂರುಗಳನ್ನೂ ತುರುಕಿಸಿ ಹಂಡೆ ನೀರುಕಾಯಿಸುತ್ತಿದ್ದ. ಬಾಣಂತಿಯರು ಮಿಯುವಂತೆ ಗಂಟೆಗಟ್ಟಲೆ ಮಿಂದು ನನ್ನ ತಂದೆಯವರಿಗೂ ಮಿಲೇ ಅನ್ನೆರೆ..! ಎಂದು ಸತ್ಕರಿಸುತ್ತಿದ್ದ. ಹೀಗೆ ಹೆಚ್ಚಿನ ಸಂಧರ್ಭದಲ್ಲಿ ಆತನ ಕೆಲಸ ಬಡ್ದಾಗಿದ್ದರು ನಮ್ಮ ಮನೆಯ ಕಿಟಕಿ, ಬಾಗಿಲುಗಳನ್ನು ನನ್ನ ತಂದೆಯವರು ಅತನಿಂದಲೇ ಮಾಡಿಸುತ್ತಿದ್ದರು. ಆತನ ಹಂಡೆ ನೀರು ಕಾಯಿಸುವ ಕರ್ಮದಿಂದ ಅಷ್ಟು ಪ್ರಭಾವಿತರಾಗಿದ್ದರು ಎನಿಸುತ್ತದೆ.

ನನ್ನ ಮಾವನವರೊಬ್ಬರು ಹರಿದಾಸರು. ನಾಡಿನಾದ್ಯಂತ ಹರಿಕಥಾ ಪ್ರಸಂಗಗಳನ್ನು ಮಾಡುತ್ತಾ ಹೆಸರುವಾಸಿಯಾದವರು. ಅವರ ಹರಿಕಥಾ ಕಾಲಕ್ಷೇಪ ನಮ್ಮೂರಿನ ಯುವಕರೋಮ್ಮೆ ಹಮ್ಮಿಕೊಂಡಿದ್ದರಂತೆ. ಈ ಸಂಧರ್ಭದಲ್ಲಿ ಬಡ್ದು ಆಚಾರಿ ನಮ್ಮ ಮನೆಯಲ್ಲೇ ಇದ್ದ. ಇದೇ ಸಂಧರ್ಭದಲ್ಲಿ ನಮ್ಮ ಮನೆಗೆ ಆಗಮಿಸಿದ್ದ ಮಾವನವರು ಚಿಕ್ಕವನಾಗಿದ್ದ ನನ್ನಣ್ಣನಲ್ಲಿ ಆಚಾರಿಯ ಹೆಸರೇನು ಎಂದು ಕೇಳಿದಾಗ ಊರವರು ಬಡ್ದು ಆಚಾರಿ ಎಂದು ಹೇಳುವುದನ್ನು ತನ್ನ ಮಸ್ತಕದಲ್ಲಿ ನೆನಪಿಟ್ಟುಕೊಂಡ ನನ್ನಣ್ಣ ಜೋರಾಗಿ ಬಡ್ದು ಆಚಾರಿ ಎಂದು ಹೇಳಿಬಿಟ್ಟನಂತೆ, ಎಂದು ಇತ್ತೀಚಿಗೆ ಭೇಟಿಯಾದ ನನ್ನ ಮಾವನವರು ನಗುತ್ತಾ ನೆನಪಿಸಿಕೊಳ್ಳುತ್ತಿದ್ದರು. 

ನನ್ನಣ್ಣನಂತು ಸಣ್ಣವನಿದ್ದಾಗ ಮಹಾ ಪೋಕರಿಯಂತೆ. ಕೂತಲ್ಲಿ ನಿಂತಲ್ಲಿ ಮಹಾ ಲೂಟಿಯನ್ನು ಮಾಡುತ್ತಾ ನನ್ನಮ್ಮನನ್ನು ಗೋಳು ಹೊಯ್ದುಕೊಳ್ಳುತ್ತಿದ್ದಾಗ ಈ ಬಡ್ದು ಅಚಾರಿಯೇ ನನ್ನಣ್ಣನ ಕೇರ್ ಟೇಕರ್. ಹೇಗೋ ಮಾಡಿ ಸಂತೈಸುತ್ತಿದ್ದ ಬಡ್ದು ಆಚಾರಿ ನನ್ನಮ್ಮನಿಗೆ ಆತನಿಗೆ ಬೇಯಿಸಿ ಹಾಕುವುದು ಕಷ್ಟ ಎನಿಸಿದರು ಮೌನತಾಳಿದ್ದರ ಹಿಂದೆ ಆತನ ಉಪಕಾರದ ಬಗ್ಗೆ ಕೃತಜ್ಞತಾ ಭಾವವೊಂದಿತ್ತು. 

ನಾರಾಯಣ ಆಚಾರಿ ಸ್ವತಃ ಬಡವ, ಮತ್ತು ಶ್ರೀಮಂತಿಗೆ ಆಸೆ ಪಟ್ಟವನ್ನು ಅಲ್ಲ. ತನ್ನ ಕೆಲಸಕ್ಕೆ ಎಷ್ಟು ಸಂಧಬೇಕೋ ಅಷ್ಟನ್ನೇ ತೆಗೆದುಕೊಡು ಕೃತಜ್ಞತೆಯ ನಗು ಬೀರಿ ಹೊರಟುಬಿಡುತ್ತಿದ್ದ. ತನ್ನ ಬದುಕನ್ನು, ತನ್ನನ್ನು ನಂಬಿದವರ ಬದುಕನ್ನು ನಿಭಾಯಿಸಲು ಎಲ್ಲಿಂದ ಎಲ್ಲಿಗೂ ಹೋಗುತ್ತಿದ್ದ ನಾರಾಯಣ ಆಚಾರಿ ಅಪ್ಪಟ ಶ್ರಮ ಜೀವಿ. ಕೆಲಸದಲ್ಲಿ ನಯನಾಜುಕಿನ ಕೊರತೆ ಇದ್ದರು ತನ್ನ ವರ್ತನೆಯಲ್ಲಿ, ಮಾತಿನಲ್ಲಿ ಎಂದು ವಿನಯವಂತಿಕೆಯನ್ನು ಮರೆತವನಲ್ಲ. ಹಲವು ವರ್ಷಗಳಿಂದ ಪತ್ತೆ ಇಲ್ಲದ ಬಡ್ದು ಆಚಾರಿಯನ್ನು ನನ್ನ ತಂದೆ ಪ್ರತಿಭಾರಿಯು ನಮ್ಮ ಮನೆಯಲ್ಲಿ ಕಿಟಕಿ, ಬಾಗಿಲುಗಳ ರಿಪೇರಿಗಳಿಗೆ ಬೇರೆ ಅಚಾರಿಗಳು ಬರುವಾಗ ನೆನಪಿಸಿಕೊಳ್ಳುವುದುಂಟು. ನಾನು ಕಣ್ಣಾರೆ ಆತನನ್ನು ಕಂಡಿರದಿದ್ದರೂ ನನ್ನ ಮುಂದೆ ಈ ಶ್ರೀ ಸಾಮಾನ್ಯನೊಬ್ಬನ ವ್ಯಕ್ತಿತ್ವ ಆದರ್ಶವಾಗಿ ನಿಲ್ಲುತ್ತದೆ. 



 ವಿಘ್ನೇಶ್ ತೆಕ್ಕಾರ್

Wednesday, 16 November 2011

ಸಂಪತ್ತು

ಹಣ, ಸಂಪತ್ತು, ಬಂಗಾರ
ಕಾರು-ಗೀರು, ಬಂಗಲೆಗಳ
ಬೆನ್ನುಹತ್ತಿ ಹೊರಟವನಿಗೇನು ಸುಖ
ಬದುಕ ಕಡೆಗೊಂದು ದಿನ
ಮಸಣದ ಬೂದಿಯಲ್ಲಿ ಮುಚ್ಚುವುದು
ನಗು ನಗದೆ ಮೆರೆದ ಮುಖ.




Friday, 11 November 2011

ಬದುಕು

ಸ್ಪರ್ಧೆಯೊಂದರಲ್ಲಿ ಶ್ರೀಮಂತ, ಸೋಮಾರಿ, ಸ್ವಾಮಿಜಿ ಮತ್ತು ಬಡವನಿಗೆ ಒಂದು ಪ್ರಶ್ನೆ.

ಬದುಕುವ ಬಗೆಯಾವುದು..?

ಶ್ರೀಮಂತ: ಹಣ, ಸಂಪತ್ತು, ಗೌರವ, ಕೀರ್ತಿಗಳ ಸಂಪಾದನೆ.

ಸೋಮಾರಿ: ಜೀವವಿದ್ದಷ್ಟು ದಿನ ತಿಂದುಂಡು ಮಜಾ ಉಡಾಯಿಸುವುದು.

ಸ್ವಾಮೀಜಿ: ಇಹದ ಪ್ರಲೋಭನೆಯನ್ನು ಮೀರಿ ಪರಮಾತ್ಮನಲ್ಲಿ ಐಕ್ಯ ಹೊಂದುವುದು.

ಬಡವ: ದಿನವೂ ನನ್ನ ಹೆಂಡತಿ ಮಕ್ಕಳಿಗೆ ಊಟ ಹಾಕುವುದು.