Sunday, 1 January 2012

ಸಮಾಗಮ

ಸಮಾಗಮಕ್ಕಾಗಿ ಕಾದಿದೆ ಮನಸ್ಸು
ಬಹುದಿನದ ವಿರಹ ಮೂಟೆಯ ಹೊತ್ತು
ವಯಸ್ಸು ತಂದಿದೆ ಹಲವು ಕನಸು
ಕಳೆದರೂ ಕಳೆಯದಾಗಿದೆ ಅಪೂರ್ವ ಹೊತ್ತು

ಜೋಡಿ ಹೃದಯದಲ್ಲಿ ಸುರಿಯುತ್ತಿದೆ ಪ್ರೀತಿ
ಸಂಯಮದ ಕಟ್ಟೆಯೊಡೆದು ಹರಿಯುವಷ್ಟು
ಹೊರಟಿದೆ ಜೋಡಿ ಹಕ್ಕಿ ದಾಟಿ ರೀತಿ ನೀತಿ
ಮುಗಿಲು, ನಕ್ಷತ್ರ, ಚುಕ್ಕಿ ಮುಟ್ಟುವಷ್ಟು

ಬಾನ ಶ್ವೇತ ಮೋಡಗಳ ನಡುವೆ
ನಡೆದಿದೆ ಶುಭ ಸಮ್ಮಿಲನ
ಮೊಗದ ತುಂಬಾ ಸಿಹಿ ನಗುವೆ
ಬದುಕ ಸಾರ್ಥಕತೆಯ ನಮನ

ಕಾದು ಕಾಲು ಸೋತ ಮನವಿಂದು
ಸ್ವರ್ಗ ಸುಖದ ಭಾವದೊಂದಿಗೆ
ಬದುಕಿದ್ದಾಗ ಸೇರದ ಹೃದಯಗಳಿಂದು
ಇಹವ ಮರೆತ ನಗುವ ಲೋಕದೊಂದಿಗೆ








ಹೂವೊಂದು ನಗುವಂತಿದೆ

ಹೂವೊಂದು ನಗುವಂತಿದೆ
ಮುಗಿಲ ರವಿಕಿರಣವ ನೋಡಿ
ಗಿಡವೊಂದು ಅಳುವಂತಿದೆ
ಬುಡಕ್ಕೆ ಹತ್ತಿರುವ ಹುಳುವ ನೋಡಿ

ತಾಯೊಂದು ಕಣ್ಣೀರಿಡುವಂತಿದೆ
ಇಹವ ತೊರೆದ ಮಗುವ ನೆನೆದು
ಕೂಸೊಂದು ಕುಣಿವಂತಿದೆ
ಅಮ್ಮನಪ್ಪುಗೆಯ ಬಿಸಿಯನ್ನು ನೆನೆದು

ನದಿಯೊಂದು ಮಾರ್ದನಿಸುವಂತಿದೆ
ಅಗಾಧ ಕಡಲಲ್ಲಿ ಲೀನವಾಗುವ ಕುರಿತು
ಕಡಲೊಂದು ಮೊರೆವಂತಿದೆ
ನನ್ನೊಳಗೆ ಸತ್ತ ನದಿಗಳ ಕುರಿತು

ದನವೊಂದು ಗೊಗರೆವಂತಿದೆ
ಹಾಲ ಹಿಂಡುವ ಮಾನವನ ತಿವಿದು
ಕರುವೊಂದು ಜಿಗಿವಂತಿದೆ
ಕೆಚ್ಚಲು ಹಾಲ ಸಿಹಿ ನೆನೆದು

ಬದುಕೊಂದು ಗಹಗಹಿಸುವಂತಿದೆ
ಕಳೆದು ಅಳುವವರ ನೋಡಿ
ಮನುಷ್ಯನೊಬ್ಬ ಮರುಗುವಂತಿದೆ
ಕೈಯಲ್ಲಿದ್ದ ಬದುಕ ಕಳೆದವರ ನೋಡಿ.