Wednesday 28 December 2011

ಕಡಿಮೆ ಧಾರ್ಮಿಕತೆ ನಮ್ಮನ್ನು ಅಧರ್ಮಿಯಾನ್ನಾಗಿಸುವುದೇ..?

ಧರ್ಮ ನಮಗೆಲ್ಲರಿಗೂ ಗುರುತಿನ ಚೀಟಿ ಇದ್ದಂತೆ. ಆತ ಹಿಂದೂ, ಇತ ಮುಸಲ್ಮಾನ, ಆಕೆ ಕ್ರಿಶ್ಚಿಯನ್ ಹೀಗೆ ಇಂದು ಧರ್ಮ ನಮ್ಮ ಐಡೆಂಟಿಟಿಯಾಗಿದೆ. ಧರ್ಮದ ಪ್ರಾಥಮಿಕ, ಮೂಲಭೂತ ವಿಚಾರಗಳು, ವಿಧಿ-ವಿಧಾನಗಳು ಎಂದೋ ತುಕ್ಕು ಹಿಡಿದು ನಮ್ಮಿಂದ ದೂರವಾಗಿದೆ. ಧರ್ಮ ಕೇವಲ ಗುರುತು ಮತ್ತು ಕಲಹವೆಬ್ಬಿಸಲು ಮಾತ್ರ ಉಪಯೋಗಿಸಲ್ಪಡುವ ವಸ್ತುವೆಂಬುದಾಗಿ ಅರ್ಥೈಸಿಕೊಂಡ ಜನರು ಸಮಾಜದಲ್ಲಿ ರಾಡಿ ಎಬ್ಬಿಸಲು ಶುರುವಾಗಿ ದಶಕಗಳೇ ಕಳೆದಿವೆ. 

ಸಂಘರ್ಷ ಮತ್ತು ಧರ್ಮಗಳೆರಡನ್ನು ನೋಡುವ ದೃಷ್ಟಿಕೋನಗಳು ಅನೇಕವಿದೆ. ಅವುಗಳಲ್ಲೆರಡು ಪ್ರಮುಖವಾದುದು. ಧರ್ಮವನ್ನು ಕೋಳಿ ಎಂದು ಮತ್ತು ಸಂಘರ್ಷ ಅ ಕೋಳಿಯ ಮೊಟ್ಟೆ ಎಂದು ಕಾಣುವ ಇಂದಿನ ಕ್ರಾಂತಿಕಾರಿ ದೃಷ್ಟಿಕೋನ ಮತ್ತು ಸಂಘರ್ಷವನ್ನು ರೋಗ ಮತ್ತು ಧರ್ಮ ಅದನ್ನು ಗುಣಪಡಿಸುವ ಮದ್ದು ಎಂದು ಪರಿಗಣಿಸುವ ಕಲಹಗಳಿಂದಾಗುವ ನಷ್ಟದ ಬಗ್ಗೆ ತಲೆಕೆಡಿಸಿಕೊಂಡವರ ದೃಷ್ಟಿಕೋನ. ಯಾವತ್ತು ಧರ್ಮದಿಂದ ಪರಸ್ಪರ ಅಥವಾ ಅನ್ಯಧರ್ಮಿಯರ ಮಧ್ಯ ಸಂಘರ್ಷಗಳು ಏರ್ಪಡುವುದಿಲ್ಲ ಬದಲಾಗಿ ರ್ಮದ ದುರುಪಯೋಗ ಅಥವಾ ಧರ್ಮವನ್ನು ತಪಾಗಿ ಅರ್ಥೈಸಿಕೊಂಡವರ ಪರಿಣಾಮ ಮಾತ್ರ ನಮ್ಮ ಯುವಕರನ್ನು ಸಂಘರ್ಷದತ್ತ ತಳ್ಳುತ್ತದೆ. 

ಒಂದೆರಡು ವಿಚಾರಗಳು ನಾನಿಲ್ಲಿ ಪ್ರಸ್ತಾಪಿಸುವುದು ನಮ್ಮ ಧಾರ್ಮಿಕತೆಗೆ ಸಂಬಂಧಪಟ್ಟದ್ದು. ಹಿಂದೊಂದು ಕಾಲವಿತ್ತು. ನಮ್ಮ ಪೂರ್ವಿಕರೆಲ್ಲಾ ಅತೀ ಧಾರ್ಮಿಕರಾಗಿದ್ದ ಕಾಲವೊಂದಿತ್ತು. ಪ್ರತೀ ಧರ್ಮದ ಅನುಯಾಯಿಗಳು ತಮ್ಮ ಧರ್ಮದಲ್ಲಿನ ವಿಧಿ-ವಿಧಾನ, ಅಚಾರ-ವಿಚಾರಗಳನ್ನು ತಪ್ಪದೇ ಪಾಲಿಸುತ್ತಿದ್ದ ಕಾಲ. ಧರ್ಮದ ಬಗ್ಗೆ ಆಳವಾಗಿ ಅರಿತುಕೊಂಡು ಹೆಚ್ಚು ಧಾರ್ಮಿಕರಾಗಿ ಬದುಕುತ್ತಿದ್ದ ಕಾಲ. ಆದರೆ ಅನ್ಯ ಧರ್ಮಗಳೊಂದಿಗೆ ಎಂದೂ ಕಾದಾಡಿದವರಲ್ಲ. ಅಕ್ಬರನ ಆಸ್ಥಾನದಲ್ಲಿ ಬೀರಬಲ್ಲನಿಗೆ ಮುಸಲ್ಮಾನರಿಗಿಂತ ಹೆಚ್ಚು ಗೌರವ ಸಿಗುತ್ತಿತು ಎನ್ನುವುದೇ ನಾವು ನೀವು ಓದಿದ ಉದಾಹರಣೆ. 

ಹಾಗಾದರೆ ನಮ್ಮಲ್ಲಿ ಕಡಿಮೆಯಾಗುತ್ತಿರುವ ಧಾರ್ಮಿಕತೆ ನಮ್ಮನ್ನು ಅಧರ್ಮಿಯರನ್ನಾಗಿಸುತ್ತದೆಯೇ.....? ಯೋಚಿಸಬೇಕಾದ ವಿಚಾರ. ನನ್ನ ಪ್ರಕಾರ ಹೌದು. ಇವತ್ತು ಅನ್ಯ ಧರ್ಮಿಯರ ಅಸ್ತಿತ್ವವೇ ನಮ್ಮ ಅವನತಿಯೆಂದು ಭಾವಿಸಿ ಅ ಧರ್ಮದ ನಿರ್ನಾಮವನ್ನು ಬಯಸುವವರು ತಮ್ಮ ಅಥವಾ ತಾವು ಅನುಸರಿಸಬೇಕಾದ ಧರ್ಮದ ಪ್ರಾಥಮಿಕ ಮತ್ತು ಮೂಲಭೂತ ವಿಚಾರಗಳ, ವಿಧಿ-ವಿಧಾನಗಳು, ಬಗ್ಗೆ ಅನಕ್ಷರಸ್ಥರಾಗಿರುತ್ತಾರೆ. ಆದರೆ ತಮ್ಮ ಧರ್ಮದ ಶತ್ರುಗಳೆಂದು ಕಾಣುವ ಅನ್ಯ ಧರ್ಮದ ದೋಷಗಳ ಬಗ್ಗೆ ಬರೆಯಲು, ಹಳಿಯಲು ಒಂದು ಮಹಾ ಪ್ರಬಂಧಕ್ಕಾಗುವಷ್ಟು ಮಾಹಿತಿಗಳಿರುತ್ತವೆ. ಇದು ಧರ್ಮದ ದುರುಪಯೋಗ. ಇದು ತನ್ನದಲ್ಲದ ಇನ್ನೊಂದು ಧರ್ಮದ ಬಗ್ಗೆ ದ್ವೇಷ ದಳ್ಳುರಿಯನ್ನು ಹುಟ್ಟಿಸುವ ಭಾವನೆಗಳು ಇಂದಿನ ಧಾರ್ಮಿಕ ಮುಖಂಡರ ಮತ್ತು ರಾಜಕೀಯ ಶಕ್ತಿಗಳು ನಮ್ಮ ಯುವಕರಿಗೆ ಚಮಚದಲ್ಲಿ ತಿನ್ನಿಸುವ ಜಾಮುನಂತಾಗಿದೆ. ಕೆಲವು ಧಾರ್ಮಿಕ ಮುಖಂಡರುಗಳು ಸರ್ವಧರ್ಮ ಸಮ್ಮೇಳನಗಳ ವೇದಿಕೆಯಲ್ಲೇ ತಮ್ಮ ಧರ್ಮವೇ ಹೆಚ್ಚು ಸಹಿಷ್ಣು ಎನ್ನುವ ಬರದಲ್ಲಿ ತಾವೇ ಅಸಹಿಷ್ಣುಗಳಾಗುವ ಸಂದರ್ಭಗಳು ಹೊಸತೇನಲ್ಲ. 

ಧರ್ಮ ಯಾವತ್ತು, ಯಾರನ್ನು, ನೀನು ಇತರ ಧರ್ಮದ ವಿಚಾರದಲ್ಲಿ ಅಧರ್ಮಿಯಾಗು ಎಂದು ಎಲ್ಲಿಯೂ ಬೋಧಿಸುವುದಿಲ್ಲ. ಜಗತ್ತಿನ ಎಲ್ಲಾ ಧರ್ಮಗಳ ಬೋಧನೆಗಳು ಶಾಂತಿ, ಸಹನೆ, ಅಹಿಂಸೆ, ಪ್ರೀತಿ ಮತ್ತು ಇತರ ಕೆಲವು ಸಮಾಜಮುಖಿಯಾದ ಚಿಂತನೆಗನ್ನಷ್ಟೇ ಹೇಳುತ್ತವೆ. ಯಾವುದೇ ಧಾರ್ಮಿಕ ಕೇಂದ್ರಗಳು ನೀನು ಅನ್ಯಧರ್ಮಿಯರನ್ನು ಹಿಂಸಿಸಿದರೆ ಮಾತ್ರ ನಿನಗೆ ದೇವಾಲಯ, ಮಸೀದಿ, ಚರ್ಚುಗಳಿಗೆ ಪ್ರವೇಶವೆಂಬ ಕಟ್ಟುಪಾಡುಗಳೆನ್ನಿಲ್ಲ. ಹೀಗೆ ಧರ್ಮ ಎಂದು ಸಂಘರ್ಷಕ್ಕೆ ಕಾರಣವಾಗುವುದಿಲ್ಲ. ಒಂದು ವೇಳೆ ಧರ್ಮವೇ ಕಲಹದ ಕಾರಣವಾಗಿದ್ದರೆ ಧರ್ಮದ ಅಸ್ತಿತ್ವದ ಶುರುವಿನಿಂದಲೇ ಸಂಘರ್ಷದ ಬೇಗೆಯಲ್ಲಿ ಬೇಯಬೇಕಿತ್ತು. ಇತಿಹಾಸದ ಪ್ರತಿ ಘಟ್ಟದಲ್ಲಿ ಧರ್ಮಸಂಘರ್ಷದ ಕುರುಹುಗಳು ಸಿಗಬೇಕಿತ್ತು. 

ಧರ್ಮ ನನ್ನ ಪ್ರಕಾರ ತೀರಾ ಖಾಸಗಿ ವಿಚಾರ. ಅವರವರ ವಿಚಾರ, ಆಸಕ್ತಿ, ಭಾವಕ್ಕೆ ಸಂಬಂಧಪಟ್ಟದ್ದು. ಒಂದು ಧರ್ಮದಿಂದ ಇನ್ನೊಂದು ಧರ್ಮಕ್ಕೆ ಮತಾಂತರವಾಗುವ ಇಚ್ಚೆ ಆತನ ವೈಯಕ್ತಿಕತೆಗೆ ಸಂಬಂಧಪಟ್ಟದ್ದಾಗಿರಬೇಕು. ಹೊರತು ಬಲವಂತಕ್ಕೆ ಮಣಿದು, ಆಮಿಷಗಳ ಮೂಲಕ ಅಥವಾ ಬೆದರಿಕೆಗಳಿಗೆ ಬಗ್ಗುವಂತದ್ದಾಗಬಾರದು. ಧರ್ಮದ ಒಳ್ಳೆ ವಿಚಾರಗಳು ಬದುಕಿನ ನಡೆಗೆ ಪೂರಕವಾಗುವವು, ಅವನ್ನು ಬದುಕಿಗೆ ಅಳವಡಿಸಿಕೊಳ್ಳಿ. ಧರ್ಮದ ಬಗ್ಗೆ ಪರಿಪೂರ್ಣ ತಿಳಿದುಕೊಳ್ಳಿ. ಸಾಧ್ಯವಾಗದಿದ್ದರೆ ಧರ್ಮದ ಸಂಘರ್ಷಕ್ಕೆ ಕಾರಣರಾಗಬೇಡಿ. ಧರ್ಮ ದೇವರುಗಳಲ್ಲಿ ನಂಬಿಕೆ ಇರದಿದ್ದರೂ ಮಾನವ ಧರ್ಮದಲ್ಲಿ ವಿಶ್ವಾಸ ಬೆಳೆಸಿಕೊಳ್ಳಿ. ನಾನು ಪಾಲಿಸುವ ಧರ್ಮವು ಅದೇ. ನಮ್ಮ ಧರ್ಮದ ಅಳತೆಗೋಲುಗಳ ಬಣ್ಣ ಕೇಸರಿ, ಹಸಿರು, ಬಿಳಿಗಳಿರಬಹುದು ಆದರೆ ನಮ್ಮ ಮಾನವ ಧರ್ಮದ ಬಣ್ಣ ಕೆಂಪು. ಅದು ನಮ್ಮ ನಿಮ್ಮ ಜೀವ ದ್ರವ ರಕ್ತ. 

- ವಿಘ್ನೇಶ್ ತೆಕ್ಕಾರು

Tuesday 22 November 2011

ಲೇಖನ - ೧: ಬಡ್ದು ಆಚಾರಿ

                       

ನಮ್ಮ ಮನೆ ಇರುವುದು ಬೆಳ್ತಂಗಡಿ ತಾಲೂಕಿನ ಒಂದು ಸಣ್ಣ ಗ್ರಾಮ ತೆಕ್ಕಾರು. ನಾನು ಹುಟ್ಟಿ ಪದವಿ ಶಿಕ್ಷಣ ಮುಗಿಸುವವರೆಗೂ ಸರಿಯಾಗಿ ಬಸ್ಸುಗಳು ಬಂದು ಹೋದದ್ದಿಲ್ಲ. ಅಂತಹ ಗ್ರಾಮಕ್ಕೆ ಅದರಲ್ಲೂ ನಮ್ಮ ಮನೆಯ ಎಲ್ಲಾ ಮರದ ಕೆಲಸಕ್ಕೆ ನಾನು ಹುಟ್ಟುವುದಕ್ಕೂ ಮೊದಲು ಬರುತಿದ್ದವನೇ ಈ ಬಡ್ದು ಆಚಾರಿ. ಹೆಸರೇಕೆ ಇಷ್ಟು ಕೆಟ್ಟದಾಗಿದೆ ಎಂದುಕೊಳ್ಳಬೇಡಿ..!ಇದು ಆತನಿಗಿದ್ದ ಅನ್ವರ್ಥನಾಮ ಅರ್ಥಾತ್ ಅಡ್ಡ ಹೆಸರು. ಮೂಲ ಹೆಸರು ನಾರಾಯಣ ಆಚಾರಿ, ಆತನ ಕೆಲಸದಲ್ಲಿ ನಯನಾಜೂಕು ಇಲ್ಲದ ಕಾರಣದಿಂದ ತುಳುವಿನ ಬಡ್ದು ನಾರಾಯಣನನ್ನು ಮರೆಮಾಚಿದೆ. ತುಳು ಭಾಷೆಯಲ್ಲಿ ಬಡ್ದು ಎಂದರೆ ಆಲಸ್ಯ ಎಂಬ ಅರ್ಥ ಇರುವುದರಿಂದಲೇ ಜನರ ಬಾಯಲ್ಲಿ ನಾರಾಯಣ ಆಚಾರಿ ಬಡ್ದು ಅಚಾರಿಯಾದ್ದು ಆತನು ಕೆಲಸ ಕೆಡಿಸುತ್ತಿದಷ್ಟೇ ಸಹಜ. ಆತನ ಊರು ಪುಂಜಾಲಕಟ್ಟೆಯ ಪಕ್ಕದ ಯಾವುದೋ ಹಳ್ಳಿಯಂತೆ ಎಂದು ನಾನು ನನ್ನ ತಂದೆಯವರಲ್ಲಿ ಇತ್ತೀಚೆಗಷ್ಟೇ ತಿಳಿದುಕೊಂಡೆ. ನನ್ನ ತಂದೆಯವರೇ ಈ ಅಪರೂಪದ ವ್ಯಕ್ತಿಯ ಕಥೆಯನ್ನು ನನಗೆ ಹೇಳಿದವರು. ಅಷ್ಟು ದೂರದ ಊರಿಂದ ನಮ್ಮೂರಿಗೆ ಕೆಲಸೆದ ನಿಮ್ಮಿತ್ತ ಕಾಲುನಡಿಗೆಯಲ್ಲಿ ಬರುವ ಈ ಮುದುಕ ನಮ್ಮೂರಿನಲ್ಲಿ ಎಲ್ಲೇ ಕೆಲಸವಿದ್ದರೂ ನಮ್ಮ ಮನೆ ಉಳಿದುಕೊಳ್ಳುವ ಅಥಿತಿ ಗೃಹವಿದ್ದಂತೆ ಪುಣ್ಯಾತ್ಮನಿಗೆ. ಧಣಿಗಳೇ ನಾನು ಇವತ್ತು ರಾತ್ರಿ ನಿಮ್ಮ ಮನೆಗೆ ಎಂದು ಹಲ್ಲು ಕಿರಿಯುತ್ತಾ ಬೆಳ್ಳಂಬೆಳಗ್ಗೆ ಪ್ರತ್ಯಕ್ಷವಾಗುವ ಬಡ್ದು ಆಚಾರಿ ಕೆಲಸಮುಗಿಸಿ ಸಂಜೆ ಆರರ ಸುಮಾರಿಗೆ ಮನೆಯ ತಡಮೆ ನುಳಿಕೊಂಡು ಬರುತ್ತಿದ್ದ. ಬಂದವನೇ ಮೊದಲು ಮಾಡುತ್ತಿದ್ದ ಕೆಲಸವೆಂದರೆ ಬಚ್ಚಲುಮನೆಯ ಓಲೆ ತುಂಬಾ ತರಗೆಲೆ ಅಥವಾ ನಮ್ಮ ಮನೆಯಲ್ಲೇ ಕೆಲಸವಾದರೆ ಮರದ ಸಣ್ಣ ಪುಟ್ಟ ಚೂರುಗಳನ್ನೂ ತುರುಕಿಸಿ ಹಂಡೆ ನೀರುಕಾಯಿಸುತ್ತಿದ್ದ. ಬಾಣಂತಿಯರು ಮಿಯುವಂತೆ ಗಂಟೆಗಟ್ಟಲೆ ಮಿಂದು ನನ್ನ ತಂದೆಯವರಿಗೂ ಮಿಲೇ ಅನ್ನೆರೆ..! ಎಂದು ಸತ್ಕರಿಸುತ್ತಿದ್ದ. ಹೀಗೆ ಹೆಚ್ಚಿನ ಸಂಧರ್ಭದಲ್ಲಿ ಆತನ ಕೆಲಸ ಬಡ್ದಾಗಿದ್ದರು ನಮ್ಮ ಮನೆಯ ಕಿಟಕಿ, ಬಾಗಿಲುಗಳನ್ನು ನನ್ನ ತಂದೆಯವರು ಅತನಿಂದಲೇ ಮಾಡಿಸುತ್ತಿದ್ದರು. ಆತನ ಹಂಡೆ ನೀರು ಕಾಯಿಸುವ ಕರ್ಮದಿಂದ ಅಷ್ಟು ಪ್ರಭಾವಿತರಾಗಿದ್ದರು ಎನಿಸುತ್ತದೆ.

ನನ್ನ ಮಾವನವರೊಬ್ಬರು ಹರಿದಾಸರು. ನಾಡಿನಾದ್ಯಂತ ಹರಿಕಥಾ ಪ್ರಸಂಗಗಳನ್ನು ಮಾಡುತ್ತಾ ಹೆಸರುವಾಸಿಯಾದವರು. ಅವರ ಹರಿಕಥಾ ಕಾಲಕ್ಷೇಪ ನಮ್ಮೂರಿನ ಯುವಕರೋಮ್ಮೆ ಹಮ್ಮಿಕೊಂಡಿದ್ದರಂತೆ. ಈ ಸಂಧರ್ಭದಲ್ಲಿ ಬಡ್ದು ಆಚಾರಿ ನಮ್ಮ ಮನೆಯಲ್ಲೇ ಇದ್ದ. ಇದೇ ಸಂಧರ್ಭದಲ್ಲಿ ನಮ್ಮ ಮನೆಗೆ ಆಗಮಿಸಿದ್ದ ಮಾವನವರು ಚಿಕ್ಕವನಾಗಿದ್ದ ನನ್ನಣ್ಣನಲ್ಲಿ ಆಚಾರಿಯ ಹೆಸರೇನು ಎಂದು ಕೇಳಿದಾಗ ಊರವರು ಬಡ್ದು ಆಚಾರಿ ಎಂದು ಹೇಳುವುದನ್ನು ತನ್ನ ಮಸ್ತಕದಲ್ಲಿ ನೆನಪಿಟ್ಟುಕೊಂಡ ನನ್ನಣ್ಣ ಜೋರಾಗಿ ಬಡ್ದು ಆಚಾರಿ ಎಂದು ಹೇಳಿಬಿಟ್ಟನಂತೆ, ಎಂದು ಇತ್ತೀಚಿಗೆ ಭೇಟಿಯಾದ ನನ್ನ ಮಾವನವರು ನಗುತ್ತಾ ನೆನಪಿಸಿಕೊಳ್ಳುತ್ತಿದ್ದರು. 

ನನ್ನಣ್ಣನಂತು ಸಣ್ಣವನಿದ್ದಾಗ ಮಹಾ ಪೋಕರಿಯಂತೆ. ಕೂತಲ್ಲಿ ನಿಂತಲ್ಲಿ ಮಹಾ ಲೂಟಿಯನ್ನು ಮಾಡುತ್ತಾ ನನ್ನಮ್ಮನನ್ನು ಗೋಳು ಹೊಯ್ದುಕೊಳ್ಳುತ್ತಿದ್ದಾಗ ಈ ಬಡ್ದು ಅಚಾರಿಯೇ ನನ್ನಣ್ಣನ ಕೇರ್ ಟೇಕರ್. ಹೇಗೋ ಮಾಡಿ ಸಂತೈಸುತ್ತಿದ್ದ ಬಡ್ದು ಆಚಾರಿ ನನ್ನಮ್ಮನಿಗೆ ಆತನಿಗೆ ಬೇಯಿಸಿ ಹಾಕುವುದು ಕಷ್ಟ ಎನಿಸಿದರು ಮೌನತಾಳಿದ್ದರ ಹಿಂದೆ ಆತನ ಉಪಕಾರದ ಬಗ್ಗೆ ಕೃತಜ್ಞತಾ ಭಾವವೊಂದಿತ್ತು. 

ನಾರಾಯಣ ಆಚಾರಿ ಸ್ವತಃ ಬಡವ, ಮತ್ತು ಶ್ರೀಮಂತಿಗೆ ಆಸೆ ಪಟ್ಟವನ್ನು ಅಲ್ಲ. ತನ್ನ ಕೆಲಸಕ್ಕೆ ಎಷ್ಟು ಸಂಧಬೇಕೋ ಅಷ್ಟನ್ನೇ ತೆಗೆದುಕೊಡು ಕೃತಜ್ಞತೆಯ ನಗು ಬೀರಿ ಹೊರಟುಬಿಡುತ್ತಿದ್ದ. ತನ್ನ ಬದುಕನ್ನು, ತನ್ನನ್ನು ನಂಬಿದವರ ಬದುಕನ್ನು ನಿಭಾಯಿಸಲು ಎಲ್ಲಿಂದ ಎಲ್ಲಿಗೂ ಹೋಗುತ್ತಿದ್ದ ನಾರಾಯಣ ಆಚಾರಿ ಅಪ್ಪಟ ಶ್ರಮ ಜೀವಿ. ಕೆಲಸದಲ್ಲಿ ನಯನಾಜುಕಿನ ಕೊರತೆ ಇದ್ದರು ತನ್ನ ವರ್ತನೆಯಲ್ಲಿ, ಮಾತಿನಲ್ಲಿ ಎಂದು ವಿನಯವಂತಿಕೆಯನ್ನು ಮರೆತವನಲ್ಲ. ಹಲವು ವರ್ಷಗಳಿಂದ ಪತ್ತೆ ಇಲ್ಲದ ಬಡ್ದು ಆಚಾರಿಯನ್ನು ನನ್ನ ತಂದೆ ಪ್ರತಿಭಾರಿಯು ನಮ್ಮ ಮನೆಯಲ್ಲಿ ಕಿಟಕಿ, ಬಾಗಿಲುಗಳ ರಿಪೇರಿಗಳಿಗೆ ಬೇರೆ ಅಚಾರಿಗಳು ಬರುವಾಗ ನೆನಪಿಸಿಕೊಳ್ಳುವುದುಂಟು. ನಾನು ಕಣ್ಣಾರೆ ಆತನನ್ನು ಕಂಡಿರದಿದ್ದರೂ ನನ್ನ ಮುಂದೆ ಈ ಶ್ರೀ ಸಾಮಾನ್ಯನೊಬ್ಬನ ವ್ಯಕ್ತಿತ್ವ ಆದರ್ಶವಾಗಿ ನಿಲ್ಲುತ್ತದೆ. 



 ವಿಘ್ನೇಶ್ ತೆಕ್ಕಾರ್

Wednesday 16 November 2011

ಸಂಪತ್ತು

ಹಣ, ಸಂಪತ್ತು, ಬಂಗಾರ
ಕಾರು-ಗೀರು, ಬಂಗಲೆಗಳ
ಬೆನ್ನುಹತ್ತಿ ಹೊರಟವನಿಗೇನು ಸುಖ
ಬದುಕ ಕಡೆಗೊಂದು ದಿನ
ಮಸಣದ ಬೂದಿಯಲ್ಲಿ ಮುಚ್ಚುವುದು
ನಗು ನಗದೆ ಮೆರೆದ ಮುಖ.




Friday 11 November 2011

ಬದುಕು

ಸ್ಪರ್ಧೆಯೊಂದರಲ್ಲಿ ಶ್ರೀಮಂತ, ಸೋಮಾರಿ, ಸ್ವಾಮಿಜಿ ಮತ್ತು ಬಡವನಿಗೆ ಒಂದು ಪ್ರಶ್ನೆ.

ಬದುಕುವ ಬಗೆಯಾವುದು..?

ಶ್ರೀಮಂತ: ಹಣ, ಸಂಪತ್ತು, ಗೌರವ, ಕೀರ್ತಿಗಳ ಸಂಪಾದನೆ.

ಸೋಮಾರಿ: ಜೀವವಿದ್ದಷ್ಟು ದಿನ ತಿಂದುಂಡು ಮಜಾ ಉಡಾಯಿಸುವುದು.

ಸ್ವಾಮೀಜಿ: ಇಹದ ಪ್ರಲೋಭನೆಯನ್ನು ಮೀರಿ ಪರಮಾತ್ಮನಲ್ಲಿ ಐಕ್ಯ ಹೊಂದುವುದು.

ಬಡವ: ದಿನವೂ ನನ್ನ ಹೆಂಡತಿ ಮಕ್ಕಳಿಗೆ ಊಟ ಹಾಕುವುದು.

ಮಹಾತ್ಮ


ಮಹಾತ್ಮನೋಬ್ಬನಲ್ಲಿ ಸಾಮಾನ್ಯನೊಬ್ಬ,
ಮನುಷ್ಯ ಮಹಾತ್ಮನಾಗುವುದು ಯಾವಾಗ..?
ಮುಗುಳು ನಗುತ್ತಾ ಮಹಾತ್ಮ, ಯಾವತ್ತು ಮನುಷ್ಯ ತಾನು ಮಾಡುವ ಕೆಲಸದಲ್ಲಿ, ಕಾರ್ಯದಲ್ಲಿ ತನ್ನ ಮನಸ್ಸು ಆತ್ಮಗಳನ್ನು ಕಂಡುಕೊಂಡಾಗ.

ನ್ಯಾಯ ಅನ್ಯಾಯ


ಪ್ರತಿಭಟನಾಕಾರನೊಬ್ಬನಲ್ಲಿ ಸಾಮಾನ್ಯನೊಬ್ಬ
ಪ್ರತಿಭಟನೆ ಎಂದರೇನು..?

ಪ್ರತಿಭಟನೆ ಎಂದರೆ ಅನ್ಯಾಯದ ವಿರುದ್ದ ಹೋರಾಟ, ಸತ್ಯಾಗ್ರಹ, ಚಳುವಳಿ, ಉಪವಾಸ ಇತ್ಯಾದಿ....

ಉಪವಾಸದಿಂದ ನಿಮ್ಮ ಉದರಕ್ಕೆ ಮೋಸ ಮಾಡಿದಂತಲ್ಲವೇ..? ನೀವು ಅನ್ಯಾಯಿಯಾದಂತಲ್ಲವೇ..? ಸಾಮಾನ್ಯನ ಮರು ಪ್ರಶ್ನೆ.

ನೋಡಪ್ಪ ನನ್ನ ವಾರಗಳ, ತಿಂಗಳುಗಳ ಉಪವಾಸ, ಹುಟ್ಟುತ್ತಲೇ ಹಸಿವಿಂದ ಬಳಲಿದವರಿಗೆ ಅನ್ನ ಕೊಡುವುದಾದರೆ ನನ್ನ ಪಾಲಿಗೆ ನಾನು ಅನ್ಯಾಯಿಯಾದರೂ ಪರವಾಗಿಲ್ಲ ಎಂದು ಮಾತು ಮುಗಿಸುತ್ತಾನೆ ಪ್ರತಿಭಟನಾಕಾರ.


ಅಸೆ - ದುರಾಸೆ


ಮಿನುಗು ತಾರೆ ಪಡೆಯಲೇಕೆ ಹಂಬಲ 
ಬದುಕೇ ಹೊಳಪಿಲ್ಲದ ಹರಳಾಗಿರುವಾಗ..?
ಮಳೆ ಸುರಿಸುವ ಮುಗಿಲಾಗಲೇಕೆ ಹಂಬಲ
ಮನಸ್ಸು ಬರಡು ಮರುಭೂಮಿಯಾಗಿರುವಾಗ..?



ನದಿಯು ತೊರೆಯ ಸ್ನೇಹ ಮರೆತಿರುವಾಗ
ನದಿಗೆ ಕಡಲಾಗುವ ದುರಾಸೆ...!
ಸೌಗಂಧ ಹೂವ ಋಣ ಮರೆತಿರುವಾಗ
ಸೌಗಂಧಕ್ಕೆ ತನ್ನಿಂದ ತಾನೇ ಹರಡುವಾಸೆ..!

ದೇವರ ಪರಮ ಭಕ್ತ ಎನಿಸಿಕೊಳ್ಳುವಾಸೆ
ಭಯ ಭಕ್ತಿ ಇಲ್ಲದ ನಾ-ಆಸ್ತಿಕನಿಗೆ...!
ಜನಪರ ನಾಯಕನಾಗುವಾಸೆ
ನಿಷ್ಠೆ ಕಾಳಜಿ ಇಲ್ಲದ ಮನುಷ್ಯ ಹುಳುವಿಗೆ...!

ತನ್ನ ಒಲವು ತೊಡಕುಗಳ ಅರಿವಿಲ್ಲದವನಿಗೆ
ಇತರರ ದುಮ್ಮಾನಗಳ ನೀಗಿಸುವಾಸೆ...!
ನಾನು ನಾನಲ್ಲ ಎಂದು ಬದುಕಿದ್ದರೂ
ಸಂಪತ್ತು ನನ್ನದಾಗಿಸುವಾಸೆ...! 

- ವಿಘ್ನೇಶ್ ತೆಕ್ಕಾರ್

Thursday 10 November 2011

ಸೋಲು, ಬುಡಮೇಲು


ಪಕ್ಷದ ಬುಡವನ್ನೇ ಅಲುಗಾಡಿಸಿದ ನಾಯಕನೊಬ್ಬನಿಂದ ರಾಜ್ಯ ತಿರುಗಿ ಪಕ್ಷಕಟ್ಟುವ ಭರವಸೆ. ಅಮಾಯಕರ ಮೇಲೆ ಸವಾರಿ ಮಾಡುವ ಮತ್ತೊಂದು ಹುಸಿ ಭರವಸೆ. ಇವತ್ತಿನ ಉದಯವಾಣಿಯ ಮುಖಪುಟದಲ್ಲಿ ' ರಾಜ್ಯ ತಿರುಗಿ ಮತ್ತೆ ಪಕ್ಷ ಕಟ್ಟುವೆ' ಎಂಬ ತಲೆಬರಹದೊಂದಿಗೆ ಪ್ರಕಟವಾದ ಸುದ್ದಿಯನ್ನು ಓದಿದಾಗ ನನ್ನ ಮನಸ್ಸಿಗೆ ಬಂದ ಭಾವನೆಗಳಿವು. ೨೪ ದಿನಗಳ ಜೈಲು ವಾಸದಲ್ಲಿರುವಾಗ ಮನೆ ಮನೆಯಲ್ಲೂ ದೀಪ ಹಚ್ಚಿ ಪ್ರಾರ್ಥಿಸಿದ್ದರಿಂದ ತಾನು ಬಿಡುಗಡೆಗೊಂಡೆ ಎಂದು ಹೇಳಿಕೊಂಡು ಕೈ ಜೋಡಿಸುವ ಯೆಡಿಯೂರಪ್ಪನವರೇ ನಮ್ಮ ಮನೆಯಲ್ಲಿ ನಿಮಗಾಗಿ ಯಾವ ದೀಪವನ್ನು ಹಚ್ಚಿಲ್ಲ ಎಂಬುದನ್ನು ಸ್ಪಷ್ಟ ಪಡಿಸುತ್ತೇನೆ. ಯೋಗಿ ಎನಿಸಿಕೊಂಡ ರಾಜಕಾರಣಿಗಳ ಕಾಲು ಹಿಡಿದು, ಅವರಿಗೆ ಸ್ಪಷ್ಟನೆ ನೀಡಿದರೆ ನಿಮ್ಮ ಮುಖಕೆ ಎರಚಿದ ಸೆಗಣಿಯನ್ನು ಒರೆಸುವ ಕೈಂಕರ್ಯವನ್ನಷ್ಟೇ ಮಾಡಬಲ್ಲರವರು. ನಿಮ್ಮ ಭಾಷಣದಲ್ಲಿ ಪದೇ ಪದೇ ಉಪಯೋಗವಾಗುವ ನೈತಿಕತೆ, ಮೌಲ್ಯಗಳಂತಹ ಉತ್ತಮ ಶಬ್ದಗಳ ಅರ್ಥ ಗೊತ್ತಿದ್ದರೆ ಈ ನಾಡಿನ ಸಾಮಾನ್ಯ ಜನರ ಕಾಲಿಗೆ ಬೀಳಿ. ಆಗ ನಾನು, ನನ್ನತಹ ಹಲವಾರು ರಾಜ್ಯದ ಪ್ರಗತಿಯ ಬಗ್ಗೆ ಕಳಕಳಿ ಇರುವಂತಹವರಿಗೆ ಅಲ್ಪಸ್ವಲ್ಪ ಸಮಾಧಾನ ತಂದಿತು. ಜಾಮೀನು ದೊರೆತ ಕೂಡಲೇ ಗೆದ್ದು ಬಿಟ್ಟೆ ಎಂದು ಜನರ ನಂಬಿಕೆ ಗಿಟ್ಟಿಸುವ ಬುಡಮೇಲು ನೀತಿ ಬೇಡ. ಒಂದು ವೇಳೆ ಹಗರಣ ಮುಕ್ತರಾಗಿ ಬಂದು ಮತ್ತೆ ನಾಯಕನಾದರೆ ಓಹೋ ಇದು ಇಂಡಿಯಾ..! ಎಂದು ಕೊಳ್ಳಬೇಕಷ್ಟೇ. ಆದರೆ ನ್ಯಾಯಪರ ಚಿಂತನೆ ಉಳ್ಳ ಜನರ ಮನಸ್ಸಿನಲ್ಲಿ ನಡೆಯುವ ಮತದಾನದಲ್ಲಿ ಯಾವತ್ತೋ ಸೋತಿದ್ದಿರ ಯೆಡ್ಡಿ ದೊರೆಗಳೆ.

Tuesday 8 November 2011

ಮನುಷ್ಯತ್ವ


ಭಿಕ್ಷುಕರ ಪುಟ್ಟ ಹುಡುಗನೊಬ್ಬ ಬೀದಿಬದಿಯಲ್ಲಿ ಏನೋ ಹುಡುಕುತ್ತಿದ್ದ.
ಕೆಲ ಹೊತ್ತಿನಿಂದ ಗಮನಿಸುತ್ತಿದ್ದ ರಿಕ್ಷಾ ಚಾಲಕನೊಬ್ಬ ಹುಡುಗನ ಬಳಿ ಬಂದು, ಏನೋ ಪುಟ್ಟ ಏನ್ ಕಳೆದುಕೊಂಡಿದ್ದಿಯಾ...? ಎಂದು ಕೇಳತೊಡಗಿದ. 
ಪ್ರತಿಯಾಗಿ ನಾನು ಮನುಷ್ಯತ್ವವನ್ನು ಹುಡುಕುತ್ತಿದ್ದೇನೆ ಎಂಬುದಾಗಿ ಉತ್ತರಿಸಿದ ಪುಟ್ಟ. 
ಲೇ ಹುಚ್ಚು ಹಿಡಿದಿದಿಯೇನೋ ನಿಂಗೆ, ಮನುಷ್ಯತ್ವ ಎಲ್ಲಾದ್ರೂ ಬೀದಿ ಬದಿ ಸಿಗೊಕ್ಕೆ ಏನು ಕಿತ್ತೋಗಿರೋ ಚಪ್ಲಿನಾ..? ಮನುಷ್ಯತ್ವ ಮನುಷ್ಯರಲ್ಲಿ ಇರೊತ್ತೆ ಕಣೋ ಎಂದ ರಿಕ್ಷಾ ಚಾಲಕ. 
ಹೌದಾ! ಮತ್ತೆ ಎರಡು ದಿನದ ಹಿಂದೆ ನನ್ನ ಅಮ್ಮಂಗೆ ಖಾಯಿಲೆ ಜೋರಾಗಿದೆ, ಆಸ್ಪತ್ರೆಗೆ ಕರ್ಕೊಂಡು ಹೋಗ್ಬೇಕು ಅಂದಾಗ ನನ್ನಲ್ಲಿ ದುಡ್ಡು ಇಲಾಂತ ನೀನು ಬರ್ಲಿಲ್ಲ. ಅಮ್ಮ ತೀರ್ ಕೊಂಡಳು. ನೀನು ಮನುಷ್ಯ ತಾನೇ..? ಎಂದು ಪ್ರಶ್ನಿಸಿದಾಗ ಸುಟ್ಟ ಬದನೇಕಾಯಿ ಹಂಗಿತ್ತು ರಿಕ್ಷಾ ಚಾಲಕನ ಮುಖ.

-ವಿಘ್ನೇಶ್ ತೆಕ್ಕಾರ್

ಬಂದ ಯಡಿಯೂರಪ್ಪ .....!


ಅಂತು ಇಂತೂ ಬಂದ ಯಡಿಯೂರಪ್ಪ
ಜೈಲ ಬಂಧನ ದಾಟಿ
ಕುಂತು ಸಾವರಿಸಿಕೊಂಡು
ಹಣ ತಿಂದು ಮತ್ತೆಂದು ಜೈಲ ಭೇಟಿ...
?





Wednesday 2 November 2011

ತೇಜಸ್ವಿ ಬರಹಗಳಲ್ಲಿ ಮಲೆನಾಡ ಬದುಕು


-ವಿಘ್ನೇಶ್ ತೆಕ್ಕಾರ್
ಮಲೆನಾಡಿನ ತಪ್ಪಲಿನ ತಾಲೂಕಾದ ಬೆಳ್ತಂಗಡಿಯ ಆಸುಪಾಸಿನಲ್ಲಿಯೇ ಹುಟ್ಟಿ ಬೆಳೆದವನಾದರೂ ಅದೇಕೋ ಗೊತ್ತಿಲ್ಲ ಕಾಡು, ಬೆಟ್ಟ, ಗುಡ್ಡ, ಕಣಿವೆ ತಪ್ಪಲುಗಳೆಂದರೆ ಎಲ್ಲಿಲ್ಲದ ಆಸಕ್ತಿ, ಕುತೂಹಲ, ಪ್ರೀತಿ. ದಟ್ಟ ಕಾಡಿನ ಅಗಾಧ ಮೌನ, ಬೃಹದಾಕಾರದ ಮರಗಳ ಟೊಂಗೆಗಳ ನಡುವೆ ಸುಳಿದಾಡುವ ಗಾಳಿಯ ಸುಸ್ವರ, ಆಗೊಮ್ಮೆ ಈಗೊಮ್ಮೆ ಕಣಿವೆಗಳಲ್ಲಿ ಕೇಳಿಬರುವ ನರಿ, ನವಿಲು, ಕೋತಿಗಳ ಕಿರುಚಾಟ- ಕೂಗಾಟಗಳು ನನಗಿಷ್ಟ. ಕಾದಲ್ಲೊಂದು ಗೂಡು ಕಟ್ಟಿ ಬದುಕಬೇಕೆಂಬ ಅತೀವ ಹಂಬಲವಿದ್ದರೂ ನನ್ನದೇ ಅದ ಜವಾಬ್ದಾರಿ, ಕೆಲಸ ಕಾರ್ಯಗಳಿಂದಾಗಿ ನಗರಗಳಲ್ಲೇ ಉಳಿಯಬೇಕಾದ ಪರಿಸ್ಥಿತಿ. ಆದರೂ ವರ್ಷಕ್ಕೊಮ್ಮೆ ಚಾರಣ, ಪಿಕ್ನಿಕ್ ನೆಪದಲ್ಲಿ ಗೆಳೆಯರನ್ನೆಲ್ಲ ಸೇರಿಕೊಂಡು ನಾಗರಿಕ ಪ್ರಪಂಚದಿಂದ ದೂರವಿರುವ ಕಾಂಕ್ರಿಟ್ ಕಟ್ಟಡವಿಲ್ಲದ ಅರಣ್ಯಕೊಮ್ಮೆ ಭೇಟಿಕೊಟ್ಟು ಸುಖಿಸಿಬರುವ ಹವ್ಯಾಸವುಂಟು. ಆದರೂ ನನ್ನ ತೀರದ ಕಾಡಿನ ದಾಹಕ್ಕೆ ನೀರೆಯುತ್ತಿರುವುದು ಕೆ.ಪಿ. ಪೂರ್ಣಚಂದ್ರ ತೇಜಸ್ವಿ, ಕುವೆಂಪು, ನಮ್ಮ ಜಿಲ್ಲೆಯವರೇ ಆಗಿರುವ ಕೆದಂಬಾಡಿ ಜತ್ತಪ್ಪ ರೈ ಮತ್ತು ಕಾಡನ್ನೇ ವಸ್ತುವಾಗಿಟ್ಟುಕೊಂಡು ಬರೆಯುವ ಬರಹಗಾರರ ಅನುಭವಗಳು, ಬೇಟೆಯ ಕಥೆಗಳು, ಕಾದಂಬರಿಗಳು, ರೋಚಕ ಬರಹಗಳು. 

ಮೂಲತಃ ಮಲೆನಾಡಿನವರೆ ಆಗಿದ್ದ ತೇಜಸ್ವಿ ಉನ್ನತ ವ್ಯಾಸಂಗ, ಚಳುವಳಿಗಳನ್ನು, ಸಾಹಿತ್ಯವನ್ನು ಪ್ರಚುರ ಪಡಿಸಿದ್ದು ಕರ್ನಾಟಕದ ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ. ತಂದೆ ಕನ್ನಡ ಕಂಡ ಅಪ್ರತಿಮ ಕವಿ, ಕಾದಂಬರಿಕಾರ ರಾಷ್ಟ್ರಕವಿ ಕುವೆಂಪು. ಸಹಜವಾಗಿಯೇ ಸಾಹಿತ್ಯ ರಕ್ತದಲ್ಲೇ ಬಂದಿತ್ತು. ಸಂಗೀತ ಸಾಹಿತ್ಯದ ಕೃಷಿಯಲ್ಲಿ ನಿರತವಾಗಿದ್ದವರಿಗೆ ಸಾಕಷ್ಟು ಮನ್ನಣೆ ಗೌರವ ನೀಡುತ್ತಿದ್ದ ಮೈಸೂರು ಯಾಕೋ ತೇಜಸ್ವಿಯ ಮನಸ್ಸನ್ನು ಗೆಲ್ಲುವಲ್ಲಿ ಸೋತಿತೋ ಎಂಬಂತೆ ಅಪ್ಪಟ ಮಲೆನಾಡ ಜಿಲ್ಲೆ ಚಿಕ್ಕಮಗಳೂರಿನ ಮೂಡುಗೆರೆಯ ಬಳಿ ಕಾಡನ್ನು ಖರೀದಿಸಿ ಮಡದಿ ರಾಜೇಶ್ವರಿಯವರೊಂದಿಗೆ ಬದುಕುತ್ತಿದ್ದು ಅವರ ಕಾಡು ಪ್ರೀತಿಯನ್ನು ಬಿಂಬಿಸುತ್ತದೆ. ಮಲೆನಾಡಿನ ಮೇಲಿನ ಪ್ರೀತಿ ಅವರ ಬರಹಗಳಿಗೆ ಇನ್ನಷ್ಟು ಬಣ್ಣ ಕಟ್ಟಿಕೊಡುತ್ತಿತು ಎಂದರೆ ತಪ್ಪಾಗಲಾರದು. ಮನೆಯ ಹಿತ್ತಲಲ್ಲೇ ಕಾಡು, ಕಾಡಿನಲ್ಲೊಂದು ಕೆರೆ, ಕೆರೆಯ ನೀರನ್ನು ಕುಡಿಯ ಬರುವ ಗಜ ಪಡೆ, ಚಿಟ್ಟೆ ಹುಲಿ, ಬೈನೆ ಮರ, ಬುಲ್ ಬುಲ್ ಹಕ್ಕಿ, ಹೀಗೆ ಸಂಪೂರ್ಣ ಮಲೆನಾಡು ತಮ್ಮ ಬರಹಕ್ಕೆ ವಸ್ತುವಾಗಿ ಓದುಗರಿಗೆ ರಸದೌತಣವನ್ನು ಬಡಿಸುತ್ತಿದ್ದರು. 

ತೇಜಸ್ವಿಯವರ ಕಾಡಿನ ಕಥೆಗಳು, ಕರ್ವಾಲೋ, ಚಿದಂಬರ ರಹಸ್ಯ, ಮಾಯಾಲೋಕ ಹೀಗೆ ಸಾಲು ಸಾಲು ಕೃತಿಗಳಲ್ಲಿ ಮಲೆನಾಡ ಸೌಂದರ್ಯದ ದಿವ್ಯ ವರ್ಣನೆ ಎಂತಹವರನ್ನು ಸೆಳೆಯುವಂತದ್ದು. ಕಾಡಿನ ಸಣ್ಣ ಪೊದೆಗಳಿಂದ ಹಿಡಿದು ಅಪರೂಪದ ಗಿಡಗಳು, ನದಿ-ತೊರೆ, ಬೆಟ್ಟ-ಗುಡ್ಡ, ಗಾಳಿ-ನೀರು, ಕಾಡು ಹೂವಿನ ಪರಿಮಳ, ಗಗನ ಮುತ್ತಿಕ್ಕುವ ಮರಗಳು, ಮರಗಳ ಸಂದು ಗೊಂದಿನಲ್ಲಿ ಸುಳಿದಾಡುವ ಪಕ್ಷಿಗಳು, ಕಪ್ಪೆ, ನಾಯಿ(ಕಿವಿ), ಉಡ(ಮಾನಿಟರ್), ಹಾವು, ಕಾಡು ಕೋಣ ಕೂಡ ತೇಜಸ್ವಿಯವರ ಕತೆಗಳ ಪ್ರಮುಖ ಪಾತ್ರಗಳಾಗುತ್ತವೆ. ಈ ಪ್ರಾಣಿಗಳಿಲ್ಲದೆ ಕಥೆಯೇ ಅಪೂರ್ಣವಾಗುತ್ತಿತ್ತು ಎಂದು ಅವರ ಕಥೆಗಳನ್ನು ಓದಿದ್ದ ನಂತರ ಅನ್ನಿಸದೇ ಇರುವುದಿಲ್ಲ. ಇದೇ ತೇಜಸ್ವಿ ಓದುಗರನ್ನು ಹಿಡಿದಿಟ್ಟಿರುವ ವಿಶೇಷತೆ. 

ಇನ್ನೂ ತೇಜಸ್ವಿ ಬರಹಗಳಲ್ಲಿ ಬರುವ ಕೆಲಸದ ಪ್ಯಾರ, ಮುದುಕ ಮಾರ, ಸಿದ್ದ, ಬಿರಿಯಾನಿ ಕರಿಯಪ್ಪ, ಸ್ನೇಹಿತ ಕಡಿದಾಳು ಶಾಮಣ್ಣ, ಮತ್ತು ಮುಂತಾದ ಪಾತ್ರಗಳು ಮಲೆನಾಡುಗಳಲ್ಲಿ ಜೀವಿಸುವ ಜನಜೀವನದ ಪ್ರತೀಕವಾಗಿದೆ. ಈ ಪಾತ್ರಗಳು ಕೇವಲ ಕಥೆಗೆ ಪುಷ್ಟಿಕೊಡುವ ಕೆಲಸವನ್ನು ಮಾತ್ರ ಮಾಡದೆ ಮಲೆನಾಡ ಜನರಲ್ಲಿರುವ ಕಾಡು ಮೇಡುಗಳ ಮೇಲಿನ ಅಭಿಮಾನ ಪ್ರೀತಿ, ಬಡವರ ಮೇಲಿನ ಕಾಳಜಿ, ಮೌಧ್ಯತೆ ಎನಿಸಿದರೂ ಪ್ರಕೃತಿಯನ್ನು ರಕ್ಷಿಸುವ ಆಚರಣೆಗಳ ಬಗ್ಗೆ ನಮ್ಮನ್ನು ಪ್ರಜ್ನಾವಂತರನ್ನಾಗಿ ಮಾಡುತ್ತದೆ. 

ಅವರು ಕೇವಲ ಕಾಡನ್ನು ಮಲೆನಾಡನ್ನು ಕಥಾವಸ್ತುವಾಗಿರಿಸಿಕೊಂಡಿರದೆ ಅವುಗಳನ್ನು ಉಳಿಸಬೇಕೆಂಬ ಸಂದೇಶವನ್ನು ತಮ್ಮ ಬರಹಗಳ ಮೂಲಕ ಜನತೆಗೆ ರವ್ವನಿಸುತ್ತಿದ್ದರು. ಹಾರುವ ಓತಿಕ್ಯಾತ ಕೈಗೆ ಸಿಕ್ಕಿದ್ದರೂ ತಪ್ಪಿಸಿಕೊಂಡು ಹಾರುತ್ತ ಪ್ರಕೃತಿಯ ಒಡಲಲ್ಲಿ ಕಣ್ಮರೆಯಾಗುತ್ತಾ ಅವರ ಕರ್ವಾಲೋ ಕಾದಂಬರಿ ಅಂತ್ಯವಾಗುವುದು ಇಂದು ನಶಿಸುತ್ತಿರುವ ಪ್ರಾಣಿ ಜಗತ್ತಿನ ಉಳಿವಿಗಾಗಿ ಕೊಟ್ಟ ಸಂದೇಶವಾಗುತ್ತದೆ. ಜೊತೆಗೆ ತೇಜಸ್ವಿಯವರು ಫೋಟೋಗ್ರಫಿಯನ್ನು ಹವ್ಯಾಸವಾಗಿ ಬೆಳೆಸಿಕೊಂಡು ಹಕ್ಕಿ, ಪಕ್ಕಿ, ಕಾಡುಗಳ ಫೋಟೋ ತೆಗೆಯುತ್ತಾ ಇನ್ನೊಂದು ಆಯಾಮದಲ್ಲಿ ಪ್ರಕೃತಿಯ ರಕ್ಷಣೆಯಲ್ಲಿ ತೊಡಗಿದ್ದರು.

ಹೀಗೆ ತೇಜಸ್ವಿಯವರ ಬರಹಗಳುನನ್ನಷ್ಟೇ ಅಲ್ಲ, ನನ್ನಂತಹ ಯುವ ಸಾಹಿತಿಗಳಿಗೆ, ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ನವ್ಯ ಶೈಲಿಯೊಂದನ್ನು ತೋರಿಸಿಕೊಟ್ಟವರು. ವಾಸ್ತವ ಜಗತ್ತಿನ ನಿರ್ಜಿವ ವಸ್ತುಗಳು ಕೂಡ ಸಾಹಿತ್ಯಕ್ಕೆ ವಸ್ತು ಎಂದು ತೋರಿಸಿಕೊಟ್ಟವರು. ಅವರು ತಮ್ಮ ಕೆಲಸ ಮುಗಿಸಿ ಕೈಲಾಸ ಸೇರಿದ್ದರೂ ನಮ್ಮ ನಿಮ್ಮ ಮನ ಮನದಲ್ಲೂ ದಿನವೂ ಅನುರಣಿಸುತ್ತಿದ್ದಾರೆ. ಪ್ರಾಯಶಃ ನನಗೂ ತೇಜಸ್ವಿಯವರಂತೆ ವಸ್ತುನಿಷ್ಠ ಬರಹಗಾರನಾಗಬೇಕೆಂದು ಆ ದಾರಿಯಲ್ಲೇ ಸಾಗುತ್ತಿದ್ದೇನೆ. ಈ ರೀತಿ ತೇಜಸ್ವಿಯವರು ಇನ್ನೂ ಯಾರ್ ಯಾರಿಗೆ ಮೋಡಿ ಮಾಡಿರುವರೋ ನಾ ಕಾಣೆ. 


Friday 21 October 2011

ಎಲ್ಲವೂ ಬದಲಾಗಿದೆ..............!


-     ವಿಘ್ನೇಶ್ ,ತೆಕ್ಕಾರ್ 
           ಮಾರಿ ಕಣಿವೆಯ ಕಂದರದೊಳಗಿಂದ  ನವಿಲೊಂದು ಕುಯ್ಯೋ ........ ಕುಯ್ಯೋ ಎಂದು ಕೂಗಿದಾಗ ಪುಟ್ಟಪ್ಪ ಅಂಜಿ ಅಳುಕಿ ಬಿದ್ದ.ಆತ ಆಷಾಡದ ಹನಿ ಕಡಿಯದ ಮಳೆಯಲ್ಲಿ ದತ್ತ ಕಾಡಿನಲ್ಲಿ ,ನಡುರಾತ್ರಿಯಲ್ಲಿ ನಡೆಯುತಿದ್ದ ಅನ್ನುವದಕ್ಕಿಂತ ಓಡುತಿದ್ದ ಅನ್ನುವದೆ ಸಮಂಜಸ.ಗುಳಿ ಬಿದ್ದ ಕಣ್ಣುಗಳಲ್ಲಿ ಅವ್ಯಕ್ತ ಆತಂಕ,ಮೈಯಲ್ಲಿ ಸಣ್ಣಗೆ ನಡುಕ,ಮುಂದೇನು...........?ಎಂಬ ದುಗುಡ ತುಂಬಿದ ಮನ,ಕಲ್ಲು-ಮುಳ್ಳು ,ಹಾವು-ಚೇಳುಗಳನ್ನೂ ಲೆಕ್ಕಿಸದೆ ವೇಗವಾಗಿ ಓಡುವ ಕಾಲುಗಳು,ವರುಣನ ರಕ್ಷಣೆಗೆ ಕಂಬಳಿ ಹೊದ್ದು ,ಕೈಯಲ್ಲಿ ರಕ್ತ ಸಿಕ್ತ ಚಾಕುವಿನ ಜೊತೆ ಪಲಾಯನ ಗೈಯುತಿದ್ದ ಪುಟ್ಟಪ್ಪನಿಗೆ ನವಿಲ ಕೂಗೊಂದು ಯಮಲೋಕದ ರಣ ಕಹಳೆಯಂತೆ ಕೇಳಿತು.  
               ಕಾಡು ದಾಟಿ ಟಾರು ರೋಡು ತಲುಪಿದ ಪುಟ್ಟಪ್ಪ ಬಂದ ಕಾಟದ ಲಾರಿಯೋ ಅಥವಾ ಮರಳು ಸಾಗಿಸುವ ಲಾರಿಯಲ್ಲಿ ಆದಷ್ಟು ಬೇಗ ಜಾಗ ಖಾಲಿ ಮಾಡಬೇಕು ಅಂದುಕೊಳ್ಳುತ್ತಿರುವಾಗಲೇ ಸಿಂಗಾರಿ ಪೇಟೆ ಕಡೆಯ ಇಳಿಜಾರಿನಲ್ಲಿ ಲಾರಿಯೊಂದು ಬರುವ ಸದ್ದು ಕೇಳತೊಡಗಿತು.ಲಾರಿಯ ಸದ್ದು ಕಿವಿಗೆ ಬಿದ್ದ ತಕ್ಷಣ ಕೈಯಲ್ಲಿದ್ದ ಚಾಕುವನ್ನು ಅಂಗಿ ಎತ್ತಿ ಸೊಂಟಕ್ಕೆ ಸಿಕ್ಕಿಸಿಕೊಂಡು ಸನ್ನದ್ದನಾದ ಪುಟ್ಟಪ್ಪ.ಗಾಡ ಕತ್ತಲೆಯಲ್ಲಿ ಮಿಂಚುವ ಮಿಂಚಂತೆ ಬೆಳಕು ಬೀರುತ್ತಾ,ರಸ್ತೆಯಲ್ಲಿದ್ದ ಮಳೆ ನೀರನ್ನು ಚಿಮ್ಮಿಸುತ್ತಾ ಬಂದ ಲಾರಿಗೆ ಕೈ ಅಡ್ಡ ಹಾಕಿದ ಪುಟ್ಟಪ್ಪನನ್ನು ಕಂಡು ಸ್ವಲ್ಪ ಮುಂದೆ ಹೋಗಿ ಬುರ್ರ್ಎಂದು ನಿಂತಿತು ಲಾರಿ.ಡ್ರೈವರ್ ತಲೆ ಹೊರ ಹಾಕಿ,ಏನು ಪುಟ್ಟೇ ಗೌಡ್ರೆ ,ಯಾವ ಕಡೆ ಹೊಂಟ್ರಿ ಈ ಕತ್ತಲಾಗೆ?ಎಂದು ಕೇಳಿದ.ಮೊದಲೇ ಹೆದರಿದ್ದ ಪುಟ್ಟಪ್ಪನಿಗೆ ಯಾರಪ್ಪ ಇವನು ನನ್ನ ಪರಿಚಯ ಇರೋನು ಎಂದೆನಿಸಿ ಮನಸಿನಲ್ಲಿ ಭಯದ ಎಳೆಯೊಂದು ಚಿಗುರಿತು.ಉತ್ತರ ಬಾರದಿದ್ದಾಗ ಲಾರಿ ಡ್ರೈವರ್, ಯಾರಂತ ಗೊತ್ತಾಗಿಲ್ವಾ ಗೌಡ್ರೆ , ನಾನು ಸಿದ್ದ ಗೌಡ್ರೆ.ಸಿದ್ದ ಎಂಬ ಹೆಸರು ಕೇಳಿದ ಕೂಡಲೇ ಮನದ ಆತಂಕ ಸರಿದು, ಓ ಸಿದ್ದ ನೀನಾ..?ಯಾವ ಕಡೆ ಹೊರಟೆ ಮಾರಾಯ ..? ಎಂಬ ಮಾತು ಬಂತು ಪುಟ್ಟಪ್ಪನ ಬಾಯಲ್ಲಿ.ತಮಿಳುನಾಡು ಗೌಡ್ರೇ,ನೀವ್...ಎಲ್ಲಿಗೆ..?  ಪುಟ್ಟಪ್ಪ ತಡವರಿಸುತ್ತಾ ..ಆಂ..ಆಂ..  ಹಾಂ ಬೆಂಗಳೂರಲ್ಲಿ ಪರಿಚಯದವರೋಬ್ರು ತೀರಿಕೊಂಡರು ಅಂತ ಸುದ್ದಿ ಬಂತು.ಹಾಗಾಗಿ ಹೊರಟೆ ಕತ್ಲಲ್ಲಿ.ಹಂಗಾರೆ ಹತ್ತಿ ಗಾಡಿ ಬೇಗ, ಕಾಡು ದಾರಿ ಕಳ್ದು ಬಿಟ್ಟರೆ ಅಮ್ಯಾಗೆ ತೊಂದ್ರೆ-ಗಿಂದ್ರೆ ಏನಾಗಕಿಲ್ಲ, ಲೇ ಸರಿ ವಸಿ ಇತ್ತ ಕಡೆಗೆ ... ಎಂದು ಕ್ಲಿನರಿಗೆ ಒದರಿದ ಸಿದ್ದ. ನಿದ್ದೆ ಕಣ್ಣಿ ನಲ್ಲೂ ಬನ್ನಿ ಬನ್ನಿ ಗೌಡ್ರೇ , ಎಂದು ತನ್ನ ಕೊಳಕು ಹಲ್ಲುಗಳನ್ನು ಕಿಸಿಯುತ್ತ ಸ್ವಾಗತಿಸಿದ ಕ್ಲಿನರ್ ಪುಟ್ಟಪ್ಪನನ್ನ.ಹೊರಟಿತು ಲಾರಿ ಪುಟ್ಟಪ್ಪನ ಗುರಿ ತಪ್ಪಿದ ದಿಗಂತದೆಡೆಗೆ..!
              ಮಾರಿಬೈಲು ಮಲೆನಾಡ ದಿವ್ಯ ಸೋವ್ದರ್ಯದ ನಡುವಿನಲ್ಲಿ ಮೂವತ್ತು ನಲವತ್ತು ಮನೆಗಳ ಹಳ್ಳಿ.ಸುತ್ತಲು ಬೆಟ್ಟ-ಗುಡ್ಡ,ತೊರೆ-ಜಲಪಾತ,ಆಕಾಶದೆತ್ತರ ಬೆಳೆದು ನಿಂತ ನಿತ್ಯಹರಿದ್ವರ್ಣದ ಕಾಡು.ಬಹುತೇಕ ಹೊರ ಪ್ರಪಂಚದಿಂದ ಮುಕ್ತವಾದ ಹಳ್ಳಿ.ಜನರು ಸ್ವಲ್ಪವಾದರೂ ಅದುನಿಕತೆಯ ವ್ಯಭವ ನೋಡಲು ಸಹ ಎಂಟು ಮೈಲು ದೂರದ ಸಿನ್ಗಾರಪೇಟೆಗೆ ಹೋಗಬೇಕು.ವೆಂಕಟ ಗೌಡರು ಊರ ಮುಖಂಡರು.ಒಂದಷ್ಟು ಶಿವಳ್ಳಿ ಬ್ರಾಹ್ಮಣರು,ಗೌಡ ಸಾರಸ್ವತರು , ಘಟ್ಟದ ಕೆಳಗಿನ ಬಿಲ್ಲವರು,ಮುಸ್ಲಿಂ ಸಾಬರು,ಒಂದೆರಡು ಹರಿಜನ ಕುಟುಂಬಗಳು ಸೇರಿ ಕೊಂಡು ನೂರರಿಂದ ಇನ್ನುರರವರೆಗೆ ಜನಸಂಖ್ಯೆ.ಕೃಷಿ ,ಬೇಟೆ,ಕಾಡು ಉತ್ಪನ್ನಗಳ ಸಂಗ್ರಹ ಜನರ ಪ್ರಮುಖ ಉದ್ಯೋಗ.ಕಾಡು ಪ್ರಾಣಿಗಳಿಂದ ಬೆಳೆ ಹಾನಿ,ಕೋಮುಗಳ ಒಳಗೆ ಜಗಳ,ಆತನನ್ನು ಕಂಡರೆ ಈತನಿಗಾಗದು,ಇಂತಹ ಸನ್ನಿವೇಶಗಳು ಸರ್ವೇ ಸಾಮಾನ್ಯ.ಜೊತೆಗೆ ಬಡತನದ ಭದ್ರ ಮುಷ್ಠಿ.ಆದರು ಭಕ್ತಿಯ ಪರಕಾಷ್ಟೆತಗೆ ಒಂದು ಹನುಮನ ಗುಡಿ. ಮುಸ್ಲಿಮರ ಮಸೀದಿ ಒಂದಿತ್ತು.ಒಟ್ಟಿನಲ್ಲಿ ದಾರಿದ್ರ್ಯ ದಲ್ಲೂ ನೆಮ್ಮದಿಯ ಜೀವನ.
             ನೆಮ್ಮದಿಗೆ ಭಂಗ ಬರುವಂತೆ ಆ ರಾತ್ರಿ ಮರಿಬೈಲುನ ಜನರಲ್ಲಿ ಜೀವದ ಭಯ ಹುಟ್ಟಿತ್ತು.ಪುಟ್ಟಪ್ಪ ಗೌಡ ಊರ ಮುಖಂಡ ವೆಂಕಟ ಗೌಡರ  ಏಕೈಕ ತಮ್ಮ.ಹುಟ್ಟಿ ಬೆಳೆದು ನಿಂತ ಮೇಲೆ ಒಮ್ಮೆಯು ,ಜಮೀನು,ಗದ್ದೆಯ ಕಡೆಗೆ ಮುಖ ಹಾಕಿದವನಲ್ಲ.ಹೋಗಲಿ, ಒಂದು ದಿನ ಮನೆಯಲ್ಲಿ ತಿಂದ ತಟ್ಟೆಗೆ ನೀರು ಮುಟ್ಟಿಸಿದವನಲ್ಲ.ಕೂತು ತಿಂದು ಸಾಲ ಮಾಡಿ ಕಳೆಯುವದು ಬಿಟ್ಟು ಸಾಸಿವೆಯಷ್ಟು ಕೆಟ್ಟ ಚಾಳಿ ಇಲ್ಲ.ಒಂದೆರಡು ಬಾರಿ ಅಣ್ಣನ ಜವಾಬ್ಧಾರಿ ಎಂದು ಪುಟ್ಟಪ್ಪ ಮಾಡಿದ ಸಾಲ ತೀರಿಸಿ ಸುಸ್ತಾದ ವೆಂಕಟ ಗೌಡರು ತಮ್ಮನನ್ನು ಕರೆದು ಬುದ್ದಿ ಹೇಳಿದರು ಹುಟ್ಟು ಬುದ್ದಿ,ಹಂದಿ ಯಾವತ್ತಾದರೂ ಕೆಸರಲ್ಲಿ ಹೊರಲಾದುವದು ನಿಲ್ಲಿಸಿತೇ.....!!?ಎಂಬಂತಿದ್ದ ಪುಟ್ಟಪ್ಪ.ಮಾಡುವೆ ಮಾಡಿ, ಒಂದು ಮನೆ ಕಟ್ಟಿ ಕೊಡಿ ಸರಿ ಹೋದಾನು,ಸ್ವಲ್ಪ ಜವಾಬ್ಧಾರಿ ಬಂದೀತು,ಎಂಬ ಯಾರದ್ದೋ ಮಾತು ಕೇಳಿ ವೆಂಕಟ ಗೌಡರು ಬಯಲು ಸೀಮೆಯ ಕಮಲಿನಿ ಎಂಬ ಹೆಣ್ಣನ್ನು ತಂದು ಪುಟ್ಟಪ್ಪನಿಗೆ ಕಟ್ಟಿದರು ಆತನ ಒಳ್ಳೆ ಬುದ್ದಿ ಕಾಲು ಮುದುರಿಕೊಂಡು ಮೂಲೆಯಲ್ಲಿ ಬಿದ್ದಿತ್ತು.ಈ ಬಾರಿ ಬಡ್ಡಿ ಅಬ್ದುಲ್ಲ ಕೈ ಇಂದ ಎರಡು ಸಾವಿರ ಸಾಲ ತೆಗೊಂಡು ಜೂಜಾಡಿ ಕಳೆದಿದ್ದ ಪುಟ್ಟಪ್ಪ.ವೆಂಕಟ ಗೌಡರಿಗೆ ವಿಷಯ ತಿಳಿದಿದ್ದರೂ ಅವನ ಉಸಾಬರಿಯೇ ಬೇಡ ಎಂದು ಸುಮ್ಮನಿದ್ದರು.ಆದರೆ ಇದೆ ಸಾಲ ಪುಟ್ಟಪ್ಪನಿಗೆ ಮುಳುವಾಗಬೇಕೆ........?
            ಕೊಟ್ಟ ಸಾಲ ಹಿಂದಕ್ಕೆ ಪಡೆಯಲು ಅಬ್ಧುಲ್ಲ ಸಾಬ ವಾರಕ್ಕೆರಡು ಬಾರಿ ಪುಟ್ಟಪ್ಪನ ಮನೆ ಬಾಗಿಲು ತಟ್ಟಿದರು ಕಮಲಿನಿಯೇ ಬಾಗಿಲು ತೆರೆದು,ಅವರಿಲ್ಲ,ಸಿಂಗಾರ ಪೇಟೆಗೆ ಹೋಗಿದ್ದಾರೆ, ಎಂಬ ಉತ್ತರವೇ ಕಾದಿರುತಿತ್ತು.ಈ ಮೂರೂ ಕಾಸಿನ ಗೌಡ ಪೇಟೆಯಲ್ಲಿ ಏನು ಕಡ್ಧು ಗುಡ್ಡೆ ಹಾಕ್ತಾನೆ....?ಅನ್ನೋ ಯೋಚನೆ ಸಾಬನ ಮನಸಿನಲ್ಲಿ ಮೂಡಿದರೂ, ಇನ್ನೊದು ಸಾರಿ ಬರೋಣವೆಂದು ಹಿಂದೆ ಹೋಗಿದ್ದು ಒಂದೈವತ್ತು ಭಾರಿ ಆಗಿರಬಹುದು.ಆದರೆ ಈ ಭಾರಿ ಹಗಲು ಹೊತ್ತು ಬಿಟ್ಟು ರಾತ್ರಿ ಹೊತ್ತು ಮನೆಯಲ್ಲೇ ಇರ್ತಾನೆ ಅಂತ ಗೊತ್ತಾಗಿ ಅಬ್ದುಲ್ಲ ಸಾಬ ಆ ರಾತ್ರಿ ಪುಟ್ಟಪ್ಪನ ಮನೆ ಮುಂದೆ ಬಂದ.ಕಂಠ ಮುಟ್ಟ ಕುಡಿದು ನಿಲ್ಲಲು ಕೂರಲು ಆಗದೆ ಇನ್ನು ಮಲಗಲು ಅಟ್ಟನೆ ಮಾಡುತ್ತಿರಬೇಕಾದರೆ ಸಾಬನ ಆಗಮನವಾದದ್ದು  ಪುಟ್ಟಪ್ಪನಿಗೆ ಸರಿ ಕಾಣಲಿಲ್ಲ.ಏನು ಸಾಬರೇ..... ಹೊತ್ತು ಗೊತ್ತು ಇಲ್ವಾ ಸಾಲ ವಸೂಲಿಗೆ..........?ಹೋಗಿ ಹೋಗಿ ಹೊತ್ತರೆ ಬನ್ನಿ.ಎಂದು ಪುಟ್ಟಪ್ಪ ಜಾರಿಕೊಳ್ಳುವದರಲ್ಲಿಯೇ........ಏನು ಗೌಡ್ರೆ....?ದೊಡ್ಡ ಗೌಡ್ರ ಮುಖ ನೋಡಿ ಸಾಲ ಕೊಟ್ರೆ ನೀವ್ ಹಿಂಗಾ ಮಾಡೋದು.......?ನೋಡಿ ಗೌಡ್ರೆ.. ಇವತ್ತು ಹಣ ಕೊಡದೆ ಹೋಗಾಕಿಲ್ಲ ನಾನು.ನೀವ್ ಏನ್ ಮಾಡ್ತಿರೋ ಮಾಡಿ.ಅಂತ ತುಸು ಕೋಪದಿಂದಲೇ ಅಬ್ಬರಿಸಿದ ಸಾಬ.ನೋಡು ಸಾಬ ಇವತ್ತು ಹಣ ಇಲ್ಲ.ಇದ್ದರು ಇವತ್ತು ಕೊಡಲ್ಲ, ಎಂದು ಧಿಮಾಕಿನಿಂದಲೇ ಉತ್ತರ ಕೊಟ್ಟ ಪುಟ್ಟಪ್ಪ.ಅಬ್ದುಲ್ಲ ಸಾಬನಿಗಂತೂ ಅಲೆದು ಅಲೆದು ಬಳಲಿದ್ದರಿಂದ ಎಲ್ಲಿಲ್ಲದ ಕೋಪ ಉಕ್ಕಿ ಬಂದು , ಏನೋ ಗೌಡ...? ಒಳ್ಳೆ ಜನ ಅಂತ ಸಾಲ ಕೊಟ್ರೆ , ಹಲ್ಕಟ್ ತರ ನಂಗೆ ಧಿಮಾಕು ತೋರಿಸ್ತಿಯಾ?ಇವತ್ತು ಹಣ ಕೊಡಲೇ ಬೇಕು.ನಿನ್ನ ಮನೆನಾದ್ರು ಮಾರು,ಹೆಂಡ್ತಿನಾದ್ರು ಅಥವಾ  ಮಗಳನಾದ್ರು ಮಾರು, ಎಂದು ಆರ್ಭಟಿಸಿದ.ಸಕಲ ಚಟದ ದಾಸನಾಗಿದ್ದರು ಸಾಲಕಾಗಿ ಸಾಬ ಆಡಿದ ಮಾತುಗಳಿಂದ ಕೆಂಡಾಮಂಡಲನಾದ ಪುಟ್ಟಪ್ಪ ಅಲ್ಲೇ ಇದ್ದ ಅಡಿಕೆ ಹೆರೆಸುವ ಚಾಕು ತೆಗೆದು ಅಬ್ದುಲ್ಲ ಸಾಬನ ಕಿಬ್ಬೊಟ್ಟೆಗೆ ಇರಿದೆ ಬಿಟ್ಟ.ಹಟಾತ್ ಧಾಳಿ ಇಂದ ಸಾಬ ತತ್ತರಿಸಿ ನೆಲಕ್ಕೆ ಕುಸಿದು ಬಿದ್ದು ಅಂಗಳದ ಕೆಸರಲ್ಲಿ ಹೊರಳಾಡುತ್ತಾ , ಮರಿಬೈಲನ್ನು ನಿದ್ದೆ ಇಂದ ಏಳಿಸುವಂತೆ ಚೀರತೊಡಗಿದ.ಪುಟ್ಟಪ್ಪನಿಗೆ ತನ್ನಿಂದಾದ ಅನಾಹುತದ ಅರಿವಾಗಿ ತಲೆಗೆ ಹತ್ತಿದ್ದ ಕಳ್ಳ ಭಟ್ಟಿಯ ಅಮಲು ಜರ್ರನೆ ಇಳಿ ಇತು.ಸಾಬನ ಚಿರಾಟಕ್ಕೆ ಪಕ್ಕದ ಅಣ್ಣನ ಮನೆಯಲ್ಲಿ ದೀಪ ಹೊತ್ತಿತು.ಅಣ್ಣ ಬಂದರೆ ನನಗೆ ಉಳಿಗಾಲವಿಲ್ಲವೆಂದೆನಿಸಿ ಅಲ್ಲೇ ಕಿಟಕಿಗೆ ನೀತು ಹಾಕಿದ್ದ ಕಂಬಳಿಯನ್ನು ಹನಿ ಮಳೆಯ ರಕ್ಷಣೆಗೆ ಹೊದ್ದು ಪಕ್ಕದ ಕಾಡಲ್ಲಿ ಮಾಯವಾದ ಪುಟ್ಟಪ್ಪ.ಪುಟ್ಟಪ್ಪನ ಈ ಓಟದ ಬಗೆ ಅರಿಯದೆ ಅವನ ನಿಯತ್ತಿನ ನಾಯಿ ಕಾಳು ಸರಪಳಿ ಜಗ್ಗಿ ಬೊಗಳತೊಡಗಿತು.
     ಸಿದ್ದನ ಸಹಾಯದಿಂದ ಬೆಂಗಳೂರು ಬಂದಿಳಿದ ಪುಟ್ಟಪ್ಪನಿಗೆ ಮೊದಲಿನಿಂದಲೂ ಬೆಂಗಳುರನ್ನೊಮ್ಮೆ ನೋಡಬೇಕೆಂಬ ಆಸೆ ಇತ್ತು. ಆ ಅಸೆ ಇಂದು ಫಲಿಸಿದರೂ ಅನುಭವಿಸುವ ಸ್ಥಿತಿ ಪುಟ್ಟಪ್ಪನದ್ದಾಗಿರಲಿಲ್ಲ.ಕಿಸೆಯಲ್ಲಿ ನಯಾಪೈಸೆಗೂ ಗತಿ ಇಲ್ಲ, ಹೊಟ್ಟೆಯಲ್ಲಿ ಕದನ ವಿರಾಮ ಮುರಿದು ಹಸಿವು ಯುದ್ದ ಹೂಡಿದೆ.ಇವೆಲ್ಲದರ ನಡುವೆ ಎಲ್ಲಿ ಜೈಲು ಪಾಲಾಗುತ್ತೇನೋ ಎಂಬ ಅಂಜಿಕೆ.ರೈಲ್ವೆ ಸ್ಟೇಷನ್ ಹತ್ತಿರ ಬಂದಾಗ ಎಲ್ಲಿಗೋ ಹೊರಡುತಿದ್ದ ರೈಲು ಪುಟ್ಟಪ್ಪನ ಕಣ್ಣಿಗೆ ಬೀಳುತ್ತದೆ. ದೇವರು ನಡೆಸಿದಂತಾಗಲಿ ಎಂದು ಊರ ಹನುಮನಿಗೆ ಪ್ಲಾಟ್ ಫಾರಂನಿಂದಲೇ ಕೈ ಮುಗಿದು ಜನರಲ್ ಕಂಪಾರ್ಟ್ಮೆಂಟ್ ಗೆ ಕಾಲಿರಿಸಿದ.ಉತ್ತರ ಭಾರತದ ಕಡೆಗೆ ಹೋಗುವ ಆ ರೈಲಿನಲ್ಲಿ ಪುಟ್ಟಪ್ಪ ಮೂಕ.ಎಲ್ಲೆಡೆ ಹಿಂದಿಯದ್ದೆ ಕಾರುಬಾರು.ಎಡೆ ಸೀಳಿದರು ಅ,ಆ,ಇ,ಈ ಇಲ್ಲದ ಪುಟ್ಟಪ್ಪ ಬೆಪ್ಪನಾಗಿದ್ದ.ರೈಲಿನಲ್ಲಿ ತಿಂಡಿ, ಊಟ ಎಲ್ಲವೂ ಸಿಗುತ್ತದೆ ಎಂದು ಪುಟ್ಟಪ್ಪ ಯಾರಿಂದಲೋ ತಿಳಿದಿದ್ದ.ಆದರೆ ಅವಕ್ಕೆಲ್ಲ ಪ್ರತ್ಯೇಕ ಹಣ ತೆರಬೇಕೆಂದು ತನ್ನ ಸ್ವಂತ ಅನುಭವದಿಂದ ಇಂದು ತಿಳಿಯಿತು ಪುಟ್ಟಪ್ಪನಿಗೆ.
             ಅಂತು ಉತ್ತರ ಭಾರತದ ಪ್ರಸಿದ್ದ ತೀರ್ಥಕ್ಷೇತ್ರ ಕಾಶಿಯಲ್ಲಿ ಬಂದು ಬಿದ್ದ ಪುಟ್ಟಪ್ಪನಿಗೆ ಅಂದಿನಿಂದ ನಿಜ ಜೀವನದ ಮುಖಾಮುಖಿ.ನಾನೊಬ್ಬನಿದ್ದೇನೆ ಎಂದು ಚುರುಗುಟ್ಟುವ ಉದರ,ಖಾಲಿಯಾದ ಜೇಬಲ್ಲಿ  ಕುಣಿದಾಡುವ ದಾರಿದ್ರ್ಯ , ತನ್ನ ಪಾಡಿಗೆ ಕಾರಣವಾದ ದೇವರನ್ನು ಶಪಿಸುವ ಮನಸ್ಸು,ಮತ್ತೊಮ್ಮೆ ಕಾಪಾಡು ತಂದೆ ಎಂದು ಅದೇ ದೇವರನ್ನು ಮೊರೆಯಿಡುವ ಅದೇ ಮನಸ್ಸು. ಮಾರಿಬೈಲಿನ ಗೌಡರ ತಮ್ಮನೆಂಬ ಸ್ಥಾನ, ಅಂತಸ್ತು ಎಲ್ಲವೂ ಮಂಜಾಗಿ ಕರಗಿಹೋಯಿತು,ಸಾಲಮಾಡಿ ಮೋಜು ಮಾಡುತಿದ್ದಾಗ ಗೊತ್ತಿಲ್ಲದ ಹಣದ ಮೌಲ್ಯ ಇಂದು ಅರಿವಿಗೆ ಬರುತ್ತಿದೆ.ಹೊಟ್ಟೆಗಾಗಿ ಕಾಶಿಯಲ್ಲಿ ಭಕ್ತಾದಿಗಳು ತಮ್ಮ ಹಿರಿಯರಿಗೆ ಹಾಕಿದ ಪಿಂಡದ ಅನ್ನವನ್ನೇ ಕದ್ದು ತಿಂದು ಯೋಗಿಯಾದ ಪುಟ್ಟಪ್ಪ.ಬಯಸದೆ ವಿಧಿಯ ಬಂದಿಯಾದ.
                   ಮಾರಿಬೈಲು ವರ್ಷದಿಂದ ವರ್ಷಕ್ಕೆ ಸುಧಾರಿಸುತ್ತಿದೆ.ಒಂದು ಶಾಲೆ,ಪ್ರಾಥಮಿಕ ಆರೋಗ್ಯ ಕೇಂದ್ರ, ದಿನಕ್ಕೆರಡು ಬಾರಿ ಬಂದು ಹೋಗುವ ಸರ್ಕಾರಿ ಬಸ್ಸು, ಹೀಗೆ ಮೂಲ ಸೌಕರ್ಯಗಳು  ಮರಿಬೈಲಿನತ್ತ ಮುಖ ಮಾಡುತ್ತಿವೆ.ಶೋಲಾ ಅರಣ್ಯಗಳ ತಪ್ಪಲಿನ ಮಾರಿಬೈಲಿನ ಸೌ೦ದರ್ಯಕ್ಕೆ ಮಾರುಹೋಗಿ ವಿಹಾರಕ್ಕೆ,ಚಾರಣಕ್ಕೆ ಬರುವವರು ಹೆಚ್ಚಾಗಿದ್ದಾರೆ.ಪ್ರವಾಸಿಗರನ್ನು ಸುಲಿದು ಹಣ ಮಾಡುವ ಜನರು ಹೆಚ್ಚಾಗಿದ್ದಾರೆ. ಮಾರಿಬೈಲಿನ ಆಧುನಿಕತೆಯ ಓಟದೊಡನೆ ಅಬ್ದುಲ್ಲ ಸಾಬನ ಕಿಬ್ಬೊಟ್ಟೆಯ ಗಾಯವು ಮಾಸಿದೆ.ಜೋತೆಗೆ ಕಮಲಿನಿಗೆ ಗಂಡನ ನೆನಪು ಕೂಡ.
                  ಮಾರಿಬೈಲು ಬದಲಾಗುತಿದ್ದಂತೆ ಊರು,ಸಂಬಂಧಗಳೆಲ್ಲವನ್ನು ಶಿಕ್ಷೆಗೆ ಹೆದರಿ ಓದಿ ಬಂದು ಹೊಟ್ಟೆಗಾಗಿ ಕಾವಿತೊಟ್ಟ ಪುಟ್ಟಪ್ಪನಿಗು ಊರ ನೆನಪು ಕಾಡುತ್ತಿದೆ.ಅಪರಾದಿಯಾಗಿ ಪರಾರಿಯಾದವನಿಗೆ ಕಾಶಿಯಲ್ಲಿ ನೈಜ ಜೀವನದ ಸತ್ಯ ದರ್ಶನವಾದಾಗ ತನಗೆ ನೆರವಾದ ಅಣ್ಣ ದೇವರಂತೆ ಕಾಣುತ್ತಾರೆ, ತಾನು ಕೊಟ್ಟ ಕಷ್ಟ-ದುಃಖಗಳನ್ನೂ ನುಂಗಿ ತನ್ನ ಜೊತೆ ಸಂಸಾರ ನಡೆಸಿದ ಹೆಂಡತಿ ತ್ಯಾಗಿಯಾಗಿ ಕಾಣುತ್ತಾಳೆ,ಮನೆ ಬಿಟ್ಟಾಗ ಎಂಟು ವರ್ಷದ ಮಗಳು ರಾಣಿಯ ಮುಗ್ಧವಾದ ಕಣ್ಣುಗಳು ಪುಟ್ಟಪ್ಪನನ್ನು ಪದೇ ಪದೇ ಕಾಡುತ್ತದೆ.ಒಮ್ಮೆ ಊರಿಗೆ ಹೋಗಿ ಎಲ್ಲರನ್ನು ನೋಡಿಕೊಂಡು ಬರಬೇಕೆಂಬ ಮಹದಾಸೆ ಮೊಳೆಯುತ್ತದೆ ಪುಟ್ಟಪ್ಪನಲ್ಲಿ ಕೆಲವೊಮ್ಮೆ, ಆದರೆ ಯಾವ ಮುಖ ಹೊತ್ತು, ಏನು ಸಾಧಿಸಿದವನೆಂದು ಊರಿಗೆ ಕಾಲಿಡಲಿ ಎಂದು ತನ್ನ ಬಗ್ಗೆ ಕೀಳು ಭಾವ ತಳೆಯುತ್ತದೆ ಮನಸ್ಸು ಇನ್ನೊಮ್ಮೆ.ಆದರೂ ಹೊರಟೆ ಬಿಟ್ಟ ಊರಿಗೆ ಬರೋಬ್ಬರಿ ಎಂಟು ವರ್ಷಗಳ ನಂತರ.
                   ಮುಂಜಾನೆಯ ಬಸ್ಸಿನಲ್ಲಿ ಪುಟ್ಟಪ್ಪ ಬಂದು ಮಾರಿಬೈಲಿನ ಧರೆಗಿಳಿದಾಗ ಹರಡಿದ ಇಡೀ ಭೂ ಲೋಕದ ಸ್ವರ್ಗದಂತೆ ಕಾಣುತಿತ್ತು.ಬೆಟ್ಟ ಗುಡ್ಡಗಳನ್ನು ಮೋಡಗಳು ಚುಂಬಿಸುತಿತ್ತು.ಹಕ್ಕಿ ಪಕ್ಕಿಗಳ ಚಿಲಿಪಿಲಿ ಕಿವಿಗೆ ಹಿತವಾದ ಮುದ ನೀಡುತಿತ್ತು.ಕಾಡು ಹೂವುಗಳಿಂದ ಹೊರಟ ಸುಗಂದಯುತ ಪರಿಮಳವು ತನುಮನಕ್ಕೆ ಹೊಸ ಚೈತನ್ಯವನ್ನು ತುಂಬುವಂತಿತ್ತು.ಆದರೆ ಪುಟ್ಟಪ್ಪನಿಗೆ ಅದ್ಯಾವುದರ ಗಮನವಿಲ್ಲ.ಅಣ್ಣ ,ಹೆಂಡತಿ,ಮಗಳನ್ನು ನೋಡುವ ತವಕ ಮನದಲ್ಲಿ ಆವರಿಸಿತು.ಮೊದಲು ಅಣ್ಣನನ್ನು ನೋಡಿ ಆಮೇಲೆ ತನ್ನ ಮನೆಗೆ ಹೋಗೋಣ ಎಂದು ನಿರ್ಧರಿಸಿ ಹೊರಟ ಪುಟ್ಟಪ್ಪ ಕಳಚಿದ ಕೊಂಡಿಯ ಹುಡುಕಿ.
                      ಮಾರಿಬೈಲಿನ ಬೀದಿಯಲ್ಲಿ ಕುರುಚಲು ಗಡ್ಡ, ಕಾವಿ ತೊಟ್ಟ ಪುಟ್ಟಪ್ಪನನ್ನು ಯಾರು ಗುರುತು ಹಿಡಿಯುವಂತಿರಲಿಲ್ಲ. ಅಪರೂಪಕ್ಕೆ ಭಿಕ್ಷೆ ಬೇಡಿಕೊಂಡು ಬರುವ ಸಾಧುಗಳಂತೆ ಈ ಸನ್ಯಾಸಿ ಇರಬಹುದೆಂಬ ಭಾವ ತೆಳೆದಂತಿತ್ತು ಊರವರು.ವೆಂಕಟ ಗೌಡರ ಮನೆ ಮುಂದೆ ಪುಟ್ಟಪ್ಪ ಬಂದಾಗ ಮನೆಯೊಳಗಿನಿಂದ ಓರ್ವ ಅಪರಿಚಿತ ಗಂಡಸು ಹೊರ ಬಂದು ತನ್ನ ಪಕ್ಕದಲ್ಲೇ ಹಾದು ಹೋದಾಗ, ಬಹುಶಃ ಮನೆ ಮಾರಟವಾಗಿರಬೇಕು ಎಂದುಕೊಂಡ.ಆದರೂ ಒಮ್ಮೆ ವಿಚಾರಿಸಿ ನೋಡೋಣ ಎಂದು ಮನೆಯ ಅಂಗಳಕ್ಕೆ ಕಾಲಿರಿಸಿದಾಗ, ಅಂಗಳದ ಮೂಲೆಯಲ್ಲಿ ಪುಟ್ಟ ಬಾಲಕನೊಬ್ಬ ಆಡುತಿದ್ದ.ಜಗುಲಿಯಲ್ಲಿ ಸುಮಾರು ಹದಿನೈದು-ಹದಿನಾರು ಪ್ರಾಯದ ಹೆಣ್ಮಗಳು ದುಂಡು ಮಲ್ಲಿಗೆಯ ಹಾರವನ್ನು ಕಟ್ಟುತಿದ್ದಳು.ಆ ಮುಗ್ಧ ಮುಖವನ್ನು ಪುಟ್ಟಪ್ಪನ ಕಣ್ಣುಗಳು ತನ್ನ ಮಗಳು ರಾಣಿಯೆಂದು ಗುರುತಿಸಿದವು.ಎಷ್ಟು ಬೆಳೆದಿದ್ದಾಳೆ ನನ್ನ ಮಗಳು ಎಂದು ಆಶ್ಚರ್ಯದಿಂದ ನೋಡುತಿದ್ದ ಪುಟ್ಟಪ್ಪನನ್ನು ನೋಡಿ ರಾಣಿ, ಏನು ಬೇಕಾಗಿತ್ತು ಸ್ವಾಮಿಗಳೇ...?ರಾಣಿಯ ಮಾತುಗಳಿಂದ ಎಚ್ಚೆತ್ತ ಪುಟ್ಟಪ್ಪನ ಗಂಟಲಿಂದ ಮೆಲ್ಲನೆ,ವೆಂಕಟಗೌಡರು.......ಎಂಬ ಶಬ್ದ ಹೊರಬಂತು.
ಹೋ, ದೊಡ್ದಪ್ಪನಾ....! ಅವರಿಲ್ಲ.
ಎಲ್ಲೋಗಿದ್ದಾರೆ ಪುಟ್ಟಿ,ಮರು ಪ್ರಶ್ನೆ ಪುಟ್ಟಪ್ಪನಿಂದ.
ಆರು ವರ್ಷ ಆಯಿತು ,ತೀರಿ ಹೋಗಿ,
ಒಮ್ಮೆಲೇ ಅನಾಥನಾದೆ ಅನಿಸಿತು ಪುಟ್ಟಪ್ಪನಿಗೆ.ಅಷ್ಟರಲ್ಲಿ, ಯಾರೇ ಅದು....? ಎಂದು ಒಳಗಿನಿಂದ ಹೊರ ಬಂದ ಕಮಲಿನಿಯನ್ನು ನೋಡಿ ಅಣ್ಣನನ್ನು ಕಳೆದುಕೊಂಡು ಮರುಗುತಿದ್ದ ಮನಸ್ಸಿಗೆ ಸ್ವಲ್ಪಮಟ್ಟಿನ ತಂಗಾಳಿ ಬೀಸಿದಂತಾಯಿತು.ತನ್ನ ಸಂಗಾತಿಯನ್ನು ನೋಡಿ ಅನಾಥ ಭಾವ ಕಡಿಮೆಯಾಗುತ್ತಿದೆ ಎನ್ನುವಾಗಲೇ, ಅಲ್ಲೇ ಆಡಿಕೊಂಡಿದ್ದ ಪುಟ್ಟ ಬಾಲಕ, ಅಮ್ಮ...ಅಮ್ಮ...ಅಪ್ಪ ಎಲ್ಲಿ ಹೊದ್ರಮ್ಮ ಈಗ...?ಎಂದು ಓದಿ ಬಂದು ಕಮಲಿನಿಯನ್ನು ಅಪ್ಪಿ ಹಿಡಿಯಿತು.ಪುನಹಃ ಅನಾಥನಾದ ಪುಟ್ಟಪ್ಪ.ಗುಡುಗು-ಮಿಂಚು,ಬಿರುಗಾಳಿ ಎಲ್ಲವೂ ಒಮ್ಮೆಲೇ ದಾಳಿ ಇಟ್ಟವು ಮನದೊಳಗೆ.ಒಂದೆರಡು ಹನಿಗಳು ಜಾರಿ ಭೂಮಿಯನ್ನು ಮುತ್ತಿಟ್ಟವು. ಏನು ನುಡಿಯದೆ ಹಿಂತಿರುಗಿದ ಪುಟ್ಟಪ್ಪ.ಅರ್ಥವಾಗಲಿಲ್ಲ ಈ ಸ್ವಾಮಿಯ ನಡವಳಿಕೆ ಎಂಬಂತೆ ಆಶ್ಚರ್ಯದಿಂದ ರಾಣಿ ಮತ್ತು ಕಮಲಿನಿ ನೋಡುತ್ತಾ ನಿಂತರು.ಬೇಲಿ ಬದಿಯಲ್ಲಿ ಮಲಗಿದ್ದ ಕಾಳು, ಪುಟ್ಟಪ್ಪನ ನಿಯತ್ತಿನ ನಾಯಿ ಆತನ ನಿರ್ಗಮನವನ್ನು ತಲೆಯೆತ್ತಿ ನೋಡಿ, ತನಗೆ ಸಂಭಂದವಿಲ್ಲವೆಂಬಂತೆ ಪುನಹಃ ಮಲಗಿತು.ಇಷ್ಟರವರೆಗೆ ತನ್ನ ಕುಟುಂಬವನ್ನು ನೋಡಬೇಕು ಎಂದು ಹಂಬಲಿಸುತಿದ್ದ ಪುಟ್ಟಪ್ಪನಿಗೆ ಪ್ರಥಮ ಬಾರಿಗೆ ಸಾಯಬೇಕು ಎನಿಸಿತು.ಆದರೆ ಸನ್ಯಾಸಿಯಾದವನು ಸಂಭದಗಳಿಗಾಗಿ ಸಾಯುವದು ಎಷ್ಟು ಸಮಂಜಸ...?
                           ಜೀವ ಇದ್ದಷ್ಟು ಕಾಶಿಯಲ್ಲೇ ಬೇಡಿ ಬದುಕುವದು ಎಂದು ಹೊರಟ ಪುಟ್ಟಪ್ಪನಿಗೆ ಅಣ್ಣನ ಸಮಾದಿಗೆ ನಮನ ಸಲ್ಲಿಸಬೇಕೆನಿಸಿತು.ಹೆಚ್ಚಾಗಿ ಹನುಮನ ಗುಡಿಯ ಹಿಂದಿನ ಗುಡ್ಡದಲ್ಲಿ ಸಮಾದಿ ಕಟ್ಟುವದು.ಭಾರವಾದ ಮನಸ್ಸಿನಿಂದ ಗುಡ್ಡ ಹತ್ತಿ ಅಣ್ಣನ ಸಮಾಧಿಯ ಮುಂದೆ ನಿಂತ ಪುಟ್ಟಪ್ಪನ ರಕ್ತ ಹೆಪ್ಪುಗಟ್ಟಿದಂತೆ ಆಯಿತು.ವೆಂಕಟಗೌಡರ ಸಮಾಧಿಯ ಪಕ್ಕದ ಸಮಾಧಿಯಯಾ ಮೇಲೆ ದಿ/ಪುಟ್ಟಪ್ಪ ಗೌಡ,ನಮ್ಮನ್ನು ಅಗಲಿದ ನಿಮಗೆ ಚಿರಶಾಂತಿ ಕೋರುವ ಕಮಲಿನಿ ಮತ್ತು ಮಕ್ಕಳು, ಎಂದು ದಪ್ಪ ಅಕ್ಷರದಲ್ಲಿ ಬರೆದಿತ್ತು.ಇಡೀ ದೇಹಕ್ಕೆ ಎಲ್ಲೆಡೆ ಇಂದಲೂ ಮುಳ್ಳು ಚುಚ್ಚಿದಂತಾಯಿತು ಪುಟ್ಟಪ್ಪನಿಗೆ.ಮೂಕನಾದ, ಮಾತೇ ಮರೆತಂತಾಯಿತು,ಬಾಯಿ ಒಣಗಿ, ಬೆವರು ಪುಟ್ಟಪ್ಪನನ್ನು ಆವರಿಸಿತು,ಗರಬಡಿದವನಂತೆ ತನ್ನ ಸಮಾಧಿಯನ್ನು ನೋಡುತ್ತಾ ನಿಂತಿದ್ದ ಪುಟ್ಟಪ್ಪನನ್ನು ಕಂಡು ಇನ್ನೊಂದು ಸಮಾಧಿ ಕಟ್ಟುತಿದ್ದ ಗಾರೆ ತನಿಯ, ಏನು ಸ್ವಾಮಿಗಳೇ ...? ಗೌಡ್ರ ಪರಿಚಯದವರಾ...? ಅವರ ತಮ್ಮ ಪುಟ್ಟೇ ಗೌಡ್ರು ಊರು ಬಿಟ್ರಲ್ಲ, ಮರುದಿನ ಅವರ ಹೆನ ಮಾರಿಕಣಿವೆಯಲ್ಲಿ ಸಿಕ್ತಲ್ಲ....!ಅದೇ ಕೊರಗಲ್ಲಿ ಶಿವನ ಪಾದ ಸೇರಿದರು ಪಾಪ.ಎಂದು ಪುಟ್ಟಪ್ಪನಿಗೆ ವಿವರಿಸಿದ.ತನಿಯನ ಮುಖವನ್ನೇ ತುಸು ಹೊತ್ತು ಪ್ರಶ್ನಾರ್ತಕವಾಗಿ ನೋಡಿದ ಪುಟ್ಟಪ್ಪ.ಹಂಗ್ಯಾಕೆ ನೋಡ್ತಿದ್ದಿರ ಸ್ವಾಮಿಗಳೇ, ತನಿಯನ ಮಾತುಗಳಿಂದ ಎಚ್ಚೆತ್ತ ಪುಟ್ಟಪ್ಪ ಗುಡ್ಡ ಇಳಿದು ಹನುಮನಿಗೆ ನಮಸ್ಕರಿಸುವ ಭಂಗಿಯಲ್ಲಿ ನಿಂತು ಹೊರಟ ಕಾಶಿಗೆ ಪುನಹಃ ಕೆಲ ನಿಮಿಷಗಳ ಹಿಂದೆ ಸಾಯಬೇಕೆಂದು ಯೋಚಿಸಿದ ಪುಟ್ಟಪ್ಪ ಊರವರ ಮನಸ್ಸಿನಲ್ಲಿ ಯಾವತ್ತೋ ಸತ್ತಿದ್ದ.ಜೀವನವೇ ನಶ್ವರವೆನಿಸಿತು ಪುಟ್ಟಪ್ಪನಿಗೆ.ಮಾರಿಬೈಲು, ತನ್ನ ಹೆಂಡತಿ,ಮಗಳು, ನಿಯತ್ತಿನ ನಾಯಿ ಕಾಳು,ತನ್ನ ಬದುಕು,ತನ್ನ ಅಸ್ತಿತ್ವ ಎಲ್ಲವೂ ಬದಲಾಗಿದೆ......!ಎಂದೆನಿಸಿತು ಪುಟ್ಟಪ್ಪನಿಗೆ.
    
      ಜುಲೈ ೭,೨೦೧೧ ನೇ ದಿನಾಂಕದ ತರಂಗ ಪುಟ ಸಂಖ್ಯೆ ೧೦ ರಲ್ಲಿ ಪ್ರಕಟಿಸಲ್ಪಟ್ಟಿದೆ.
********************************************************************************************


ಅಂಗಡಿ ರಂಗ

ಗಾಜಿನ ಡಬ್ಬದ ತಳದಲ್ಲಿ ನಾಲ್ಕಾರು ಸಕ್ಕರೆ ಮಿಟಾಯಿಗಳು,ಪಕ್ಕದ ಡಬ್ಬದಲ್ಲಿ ಹರುಕು ಮುರುಕು ಅಂದ ಕಳೆದುಕೊಂಡ ಚಕ್ಕುಲಿಗಳು , ಮತ್ತೊಂದು ಡಬ್ಬದಲ್ಲಿ ಎಂದೋ ತಂದಿಟ್ಟ ಬಣ್ಣ ಕಳೆದುಕೊಂಡ ಪೆಪ್ಪರ್ ಮಿಟಾಯಿಗಳು , ಸೂರಿನ ಅಡ್ಡಕ್ಕೆ ತೂಗಿಟ್ಟ ಬಾಳೆ ಗೊನೆಯಲ್ಲಿ ನೇಣು ಹಾಕಿಕೊಂಡ ಒಂದು,ಎರಡು ಮತ್ತು ಮತ್ತೊಂದು ,ಒಟ್ಟು ಮೂರೂ ಕದಳಿ ಹಣ್ಣುಗಳು,ಹಿಂದಿನ ಗೋಡೆಗೆ ಮೊಳೆಹೊಡೆದು ಕಟ್ಟಿದ ಹಗ್ಗದಲ್ಲಿ ಹಿಡಿದ ದೂಳಿನಲ್ಲೂ ಮಿರ ಮಿರ ಮಿಂಚುವ ಪಾನ್ ಪರಾಗ್ , ಗುಟ್ಕಾ ಮಾಲೆಗಳು , ಒಂದು ಕಾಲು ಮುರಿದ ಟೇಬಲಿನ ಮೂಲೆಯಲ್ಲಿನ ಪೆಟ್ಟಿಗೆ ಯಲ್ಲಿ ಇನ್ನೇನು ಚಲಾವಣೆಯ ಕೊನೆ ಅಂಚಿನಲ್ಲಿರುವ ಒಂದೆರಡು ನಾಣ್ಯಗಳು , ಪೆಟ್ಟಿಗೆ ಪಕ್ಕದಲ್ಲಿಟ್ಟ ಬಾಕ್ಸಿನಲ್ಲಿ ತುಟಿಗೆ ಚುಂಬಿಸಿ ಮೋಕ್ಷಪಡೆಯಲು ಹಪಹಪಿಸುವ ಗಣೇಶ ಬೀಡಿಗಳು,ಇನ್ನೊಂದು ಮೂಲೆಯಲ್ಲಿ ದಶಕಗಳಿಂದ ಮುಕ್ತಿ ಪಡೆಯದೇ ಬಿದ್ದ ಗೋಲಿ ಸೋಡಾ ಬಾಟಲಿಗಳು , ಇವೆಲ್ಲದರ ನಡುವೆ ಮುತ್ತಾತನ ಕಾಲದ ಮರದ ಕುರ್ಚಿಯಲ್ಲಿ ವಿರಾಜಮಾನನಾಗಿರುವ ಅದರುವ ಅದರಗಳ ರಂಗಜ್ಜ.ಕ್ಷಮಿಸಿ ,ಕ್ಷಮಿಸಿ , ಎಪ್ಪತೈದು ವರ್ಷ ಪ್ರಾಯದ ನವ ತರುಣ ರಂಗ. ಅಯ್ಯೋ ಇದೇನಿದು ಈ ಹಣ್ಣು ಹಣ್ಣು ಮುದುಕನನ್ನು ಸರಿ ವಿರೋದ ಶಬ್ದಗಳಿಂದ ಪರಿಚಿಸುವದು ನಿಮಗಿಷ್ಟವಾಗಿರಲಿಕ್ಕಿಲ್ಲ..ಆದರೆ ರಂಗನಿಗಂತೂ ಆನಂದವಾದಿತು.ಇದು ನಮ್ಮೂರು ಹರಿಪುರದಲ್ಲಿ ಮೂರೂ ದಶಕಗಳಿಗಿಂತಲೂ ಹೆಚ್ಚು ವರುಷಗಳಿಂದ ನೆಲೆ ನಿಂತಿದ್ದ ವ್ಯಾಪಾರಿ ರಂಗನ ಚಿತ್ರಣ.
ಅದೊಂದು ಮುಸ್ಸಂಜೆ ನಾನು ನನ್ನೂರು ಹರಿಪುರದ ಮನೆಯಲ್ಲಿ ಏನೋ ಗಿಚುತ್ತಾ ಕೂತಿದ್ದೆ . ನನಗಂತೂ ಕಥೆ.ಕವನಗಳನ್ನು ಬರೆಯುವ ಹುಚ್ಚು.ಕೈಗೆ ಸಿಕ್ಕಿದ ಕಾಗದ ಚೂರಿನಲ್ಲೊಂದು ಶಾಸನ ಬರೆದಿಡುವ ಕೆಟ್ಟ ಬುದ್ದಿ ಎಂದು ನೀವೆ೦ದರೂ, ಒಳ್ಳೆಯ ಹವ್ಯಾಸ ನನ್ನದು.ಆ ದಿನವೂ ನನ್ನ ಮೇಜಿನ ಅಂಚಿನಲ್ಲಿದ್ದ ಕಾರ್ಡ್ ನಲ್ಲೊಂದು ಕವನ ಬರೆಯುವ ಮನಸ್ಸಾಯಿತು. ಮುಗಿಲಿನ ಬಗ್ಗೆ ಕವನ ಜೀವ ತಳೆಯಲು ಆರಂಭಿಸಿದಾಗ ಪಕ್ಕನೆ ಕಾರ್ಡ್ ಅನ್ನು ತಿರುಗಿಸಿ ನೋಡುತ್ತೇನೆ, ಅದು ನಮ್ಮೂರು ವ್ಯಾಪಾರಿ ಪುಣ್ಯತಿಥಿಯ ಆಮಂತ್ರಣ ಪತ್ರಿಕೆ.ರಂಗ ತೀರಿಕೊಂಡ ಎಂಬುದಾಗಿ ಕೆಲ ವಾರದ ಹಿಂದಷ್ಟೇ ಮನೆ ಇಂದ ಫೋನಿನ ಮೂಲಕ ತಿಳಿದಾಗಲೇ ಮನಸ್ಸಿಗೆ ಬೇಸರವಾಗಿತ್ತು.ರಂಗನ ಜೀವನವನ್ನು ಹತ್ತಿರದಿಂದ ನೋಡಿದವರಿಗೆ ಆತನ ಮರಣ ಖಂಡಿತ ಬೇಸರವನ್ನುಂಟು ಮಾಡುತ್ತದೆ.ರಂಗ ಬದುಕಿದ್ದ ರೀತಿ ಹಾಗಿತ್ತು.ಆತ ಅನುಭವಿಸಿದ ನೋವು,ಆತನ ದೇಶ ಭಕ್ತಿ , ಸ್ವಾವಲಂಬನೆ ಎಂತವರನ್ನು ಸೆಳೆಯುವಂತದ್ದು.ನನ್ನ ಮನದ ಮೂಲೆಯಲ್ಲಿ ರಂಗನ ಪುಣ್ಯ ತಿಥಿಯ ಕಾರ್ಡಿನ ಮೇಲೆ ಕವನ ಗೀಚಿದ್ದಕ್ಕೆ ಖಿನ್ನತೆ ಎನಿಸಿದರೂ, ಆತನ ಜೀವನ ಕಥೆಯನ್ನು ನಿಮ್ಮ ಮುಂದಿಡುವ ಯೋಚನೆ ಹುಟ್ಟಿದ್ದು ಆ ಕ್ಷಣದಲ್ಲೇ.

ಹರಿಪುರ ಎಂಬ ಹೆಸರು ನಮ್ಮೂರಿನ ದೇವರಾದ ಹರಿಹರೇಶ್ವರ ನೆಲೆ ನಿಂತ ತಾಣವಾದ್ದರಿಂದ ಬಂದಿದೆ ಎಂಬುದು ಪ್ರತೀತಿ.ಅತ್ತ ಕರಾವಳಿಯು ಅಲ್ಲ, ಮಲೆನಾಡು ಅಲ್ಲ,ಎಂಬಂತೆ ಭೌಗೋಳಿಕವಾಗಿ ರೂಪಿತವಾದ ಐನೂರರಿಂದ ಆರುನೂರರವರೆಗೆ ಜನಸಂಖ್ಯೆಯಿಂದ ಕೂಡಿದ ಹಳ್ಳಿ. ಭತ್ತದ ಗದ್ದೆಗಳು, ಮುಗಿಲೆತ್ತರಕ್ಕೆ ಎದ್ದು ನಿಂತ ಅಡಿಕೆ ತೋಟಗಳು, ಅಲ್ಲಲ್ಲಿ ತೊಂಡೆಕಾಯಿ ಚಪ್ಪರಗಳು,ಕುಂಬಳಕಾಯಿ,ಹಾಗಲಕಾಯಿ ಬೀಳುಗಳು,ಗೆಣಸು,ಮರಗೆಣಸುಗಳ ಸಾಲುಗಳು,ವೀಳ್ಯದೆಲೆ ಬೀಳುಗಳನ್ನು ಮೈಯೆಲ್ಲಾ ಸುತ್ತಿಕೊಂಡು ಆಕಾಶದೆಡೆಗೆ ದಿಟ್ಟವಾಗಿ ನಿಂತ ಕೋಲುಗಳು ಹಳ್ಳಿಗರ ಕೃಷಿ ಆಧಾರಿತ ಜೀವನವನ್ನು ಬಿಂಬಿಸುತ್ತದೆ.ಹಲವು ಸಾಧಕರಿಗೆ ಶಿಕ್ಷಣವನ್ನಿತ್ತ ಅನುದಾನಿತ ಖಾಸಗಿ ಶಾಲೆಯೊಂದು ಸುಮಾರು ಅರವತ್ತು ವರ್ಷಗಳಿಂದ ಹರಿಹರಪುರದ ವಿದ್ಯಾದೇಗುಲವಾಗಿದೆ.ಕಾಡುಗಲ್ಲುಗಳನ್ನೋಳಗೊಂಡ ಪಕ್ಕಾ ಮಣ್ಣಿನ ರಸ್ತೆಯಲ್ಲಿ ತೆವಳುತ್ತಾ ಕೆಂಪು ದಟ್ಟ ದೂಳನ್ನೆಬ್ಬಿಸುತ್ತ ದಿನಕ್ಕೆರಡು ಬಾರಿ ಬಂದು ಹೋಗುವ ಶ್ರೀ ವೀರಭದ್ರ ಟ್ರಾವೆಲ್ಸ್ ಹರಿಹರಪುರದ ಜನರನ್ನು,ತರಕಾರಿ ಮೂಟೆಗಳನ್ನೂ, ಆಡು ಕುರಿ ಕೋಳಿಗಳನ್ನು ಸಾಗಿಸುವ ಏಕೈಕ ಸಾರಿಗೆ.ಮಲೆನಾಡ ಕೊರಕಲುಗಳಲ್ಲಿ ಹುಟ್ಟಿ ಹರಿಹರಪುರದ ಮೂಲಕ ಹರಿಯುವ ತೊರೆಯೊಂದು ಜನ-ದನಕರುಗಳ ಬಾಯಾರಿಕೆ ತಣಿಸುವ ಜಲ ಸಂಪನ್ಮೂಲ. ಯುವಕ ಯುವತಿಯರ ಪ್ರಗತಿಯ ಸಲುವಾಗಿ ಒಂದೆರಡು ಮಂಡಳಿಗಳು ನಮ್ಮ ಹರಿಹರಪುರದಲ್ಲಿವೆ.ವರ್ಷಕ್ಕೊಮ್ಮೆ ನಡೆಯುವ ನಾಟಕ, ಯಕ್ಷಗಾನಗಳು ಮಂಡಳಿಗಳು ಜೀವಂತವಾಗಿರುವದಕ್ಕೆ ಸಾಕ್ಷಿಗಳಾಗಿವೆ.ಹೀಗೆ ಹರಿಹರಪುರದ ಅಲ್ಪ ಸೌಲಭ್ಯಗಳ ನಡುವೆ ಪಕ್ಕನೆ ಮನೆಗೆ ನೆಂಟರು, ಬಂಧುಗಳು ಬಂದರೆ ಬೇಕಾಗುವ ಸಕ್ಕರೆ, ಚಾ ಪುಡಿ, ಉಪ್ಪು,ಎಣ್ಣೆ,ಸಿಗರೇಟು,ಗುಟ್ಕಾಗಳನ್ನೂ ಒದಗಿಸುವದು ನಮ್ಮ ರಂಗನ ಅಂಗಡಿ.

ಶಾಲೆಯ ಮೆಟ್ಟಿಲನ್ನು ಹತ್ತಿದವನಲ್ಲ ರಂಗ. ಬದಲಾಗಿ ಊರ ಮಕ್ಕಳೆಲ್ಲ ದೂರದ ಊರುಗಳಿಗೆ ಕಲಿಕೆಗಾಗಿ ಹೊರಟಾಗ ರಂಗ ಕಾಡು ಮೇಡುಗಳಲ್ಲಿ ಅಲೆಯುತ್ತಾ ಕಾಡು ಪಾರಿವಾಳ,ಅಳಿಲು,ಕೋತಿ ಮರಿಗಳನ್ನು ಶಿಕಾರಿ ಮಾಡುತಿದ್ದ. ತಂದೆ ಚಿಂಕ್ರನಿಗಂತೂ ಮಗನ ಶಿಕಾರಿಯಿಂದ ದಿನವೂ ಒದಗುವ ಬಗೆ ಬಗೆಯ ಮಾಂಸದಿಂದಾಗಿ ತನ್ನ ಮಗನು ಇತರರಂತೆ ಓದಬೇಕು , ಉದ್ಯೋಗ ಹಿಡಿಬೇಕೆಂಬ ಕನಸೂ ಬೀಳಲಿಲ್ಲ.ಬಾಲ್ಯವನ್ನು ಹೀಗೆ ಕಳೆದ ರಂಗನಿಗೆ ಯವ್ವನದಲ್ಲಿ ಬದುಕಿನ ಆಸರೆಯಾದ ತಂದೆ ಚಿಂಕ್ರನ ವೃತ್ತಿಯಾದ ಗಾರೆ ಕೆಲಸವನ್ನು ಮಾಡಿದವನಲ್ಲ.ಬದಲಾಗಿ ಆಗೆಲ್ಲಾ ಕ್ರಾಂತಿ ಹುಟ್ಟಿಸಿದ್ದ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸುವ ಮಹದಾಸೆ ರಂಗನಲ್ಲಿ ಮೂಡಿತ್ತು .ಬಿಸಿರಕ್ತದ ರಂಗ ಹರಿಹರಪುರದ ಗಾಂಧೀಯಾಗಿ ಪೋಲಿ -ಪುಡಾರಿಗಳನ್ನೆಲ್ಲ ಒಗ್ಗೂಡಿಸಿ ನಡೆಸಿದ ಸತ್ಯಾಗ್ರಹದಲ್ಲಿ ಪೋಲೀಸರ ಏಟು ತಿಂದ ಸಾಧನೆ ಆತನದ್ದು.ಲಾಟಿ ಏಟು ತಿಂದ ರಂಗನ ಗಾಂಧೀಗಿರಿ ಅಲ್ಲಿಗೆ ಕೊನೆಗೊಂದು ತೋಟದ ಕೆಲಸ , ಗದ್ದೆ ಕೊಯುಲುನ ಸಂದರ್ಭದಲ್ಲಿ ಕೆಲಸ ಹೀಗೆ ಸಣ್ಣ ಪುಟ್ಟ ಕೆಲಸ ಮಾಡುತಿದ್ದನಾದರು ಯಾವ ಕ್ಷೇತ್ರದಲ್ಲೂ ಶಾಶ್ವತನಾಗಲಿಲ್ಲ.ರಂಗನ ವೃತ್ತಿಗಳೆಲ್ಲವು ಕೈ ಸುಟ್ಟುಕೊಂಡವುಗಳೇ, ಅಂತಹ ಕೆಲವು ವೃತ್ತಿಗಳ ಬಗ್ಗೆ ನಿಮಗೆ ಹೇಳಲೇ ಬೇಕು.

ಕೆಲಕಾಲ ರಂಗ ಹರಿಹರಪುರದ ಜನತೆಗೆ ಕಂಕಣ ಭಾಗ್ಯವನ್ನು ಕಲ್ಪಿಸಿಕೊಡುವ ಮಾಡುವೆ ದಲ್ಲಾಳಿಯಾಗಿ ಮೆರೆದ.ಆದರೆ ದಲ್ಲಾಳಿಯಲ್ಲಿ ಮದುವೆಯಾದ ಗಂಡಸರಂತು ತಮ್ಮ ಗಂಡುಬೀರಿ ಹೆಂಡತಿಯರ ಕಾಟ ತಾಳಲಾರದೆ ಸೊಂಟದಲ್ಲೇ ಚೂರಿ ಸಿಕ್ಕಿಸಿಕೊಂಡು ರಂಗನಿಗಾಗಿ ಹರಿಹರಪುರದಲ್ಲಿ ಸುಳಿದಾಡಲು ಶುರು ಮಾಡಿದಂದಿನಿಂದ ಸುಮಾರು ಆರು ವರ್ಷ ಆತನ ಮುಖ ನೋಡಿದ ನೆನಪು ಹರಿಹರಪುರದ ಜನತೆಗೆ ಇಲ್ಲ.
ಮತ್ತೊಂದು ದಿನ ಮುಂಜಾನೆ ಆಗಿನ ಕಾಲದ ಫ್ಯಾಶನ್ ಆಗಿದ್ದ ಕಣ್ಣಿಗೆ ಕಪ್ಪು ಗ್ಲಾಸ್ , ಬಕೇಟು ಪ್ಯಾಂಟು , ಫುಲ್ ಸ್ಲೀವ್ ಶರ್ಟ್ ತೊಟ್ಟು ಹರಿಹರಪುರದ ಬಸ್ ಸ್ಟಾಂಡಿನಲ್ಲಿ ಪ್ರತ್ಯಕ್ಷನಾದ ಎಂದು ನನ್ನ ಶಿಕ್ಷಕರಾದ ರಾಮಕೃಷ್ಣ ಮಾಷ್ಟ್ರು ಹೇಳಿದ ನೆನಪಿದೆ.ಮಾಸ್ಟ್ರೆ, ನಂಗೆ ಮುಂಬೈಯಲ್ಲಿ ದೊಡ್ಡ ಕಂಪೆನಿಯಲ್ಲಿ ಕೆಲಸ ದೊರೆತಿದೆ,ರಜಾದಲ್ಲಿ ನಿಮ್ಮನ್ನೆಲ್ಲ ನೋಡಿಕೊಂಡು ಹೋಗೋಣಾ ಅಂತ ಹೊರಟು ಬಂದೆ ಎಂದು ರಾಮಕೃಷ್ಣ ಮಾಸ್ಟರಿಗೆ ಬಾಲ್ ಪೆನ್ ಒಂದನ್ನು ಕೊಡುಗೆಯಾಗಿ ನೀಡಿದ್ದನಂತೆ. ಪೆನ್ ಕೊಟ್ಟಿದ್ದರಿಂದಲೋ ಏನೋ ಅ ಆ ಇ ಈ ಬಾರದ ರಂಗನಿಗೆ ಕಂಪೆನಿಯಲ್ಲಿ ಉದ್ಯೋಗ ಹೇಗೆ ದೊರಕಿತು ಎಂಬ ವಿಚಾರ ಮಾಸ್ಟರಿಗೆ ಆ ಕ್ಷಣದಲ್ಲಿ ಹೊಳೆಯದಿದ್ದರೂ, ತಿಂಗಳು ಮೂರಾದರು ಊರಲ್ಲೇ ಜಾಂಡ ಹೂಡಿರುವ ರಂಗನನ್ನು ನೋಡಿ ಬೊಂಬಾಯಿ ಕಂಪೆನಿಯ ಬಗ್ಗೆ ವಿಚಾರಿಸಿದ ಮಾಸ್ತರಿಗೆ ತಿಳಿದ ಸತ್ಯವೇನೆಂದರೆ, ರಂಗ ಮಂಗಳೂರಿನ ಹೋಟೆಲೊಂದರಲ್ಲಿ ಕ್ಲೀನರ್ ಆಗಿದ್ದ ಎಂಬುದಾಗಿ.ಆತ ಕೊಟ್ಟ ಪೆನ್ ಕೂಡ ಹೋಟೆಲ್ ಮಾಲಿಕನದ್ದು ಎಂದು ಮಾಸ್ಟ್ರು ನಗುತ್ತಾ ನನ್ನಲ್ಲಿ ಹೇಳಿದ್ದರೊಮ್ಮೆ.

ಹೀಗೆ ಬಹುಕಾಲ ಅದು ಇದು ಎಂದು ಹೊಟ್ಟೆ ಹೊರೆಯಲು ಪ್ರಯತ್ನ ಪಟ್ಟ ರಂಗನಿಗೆ ಕೊನೆಗೆ ಹೊಳೆದದ್ದು ಹರಿಹರಪುರದಲ್ಲೊಂದು ದಿನಸಿ ಅಂಗಡಿ.ಆಗಿನ ಕಾಲದಲ್ಲಿ ತೊರೆದಾಟಿ ನಾಲ್ಕು ಮೈಲು ದೂರದ ರಾಂಪುರದಲ್ಲಿದ್ದ ಕರಿಯ ಶೆಟ್ರ ಮನೆಯಲ್ಲಿದ್ದ ಅಂಗಡಿಗೆ ಸಣ್ಣ ಪುಟ್ಟ ಸಾಮನುಗಳಿಗೂ ಓಡಾಡಬೇಕಾದ ಪರಿಸ್ಥಿತಿ ಹರಿಹರಪುರದಲ್ಲಿತ್ತು.ಮಳೆಗಾಲದಲ್ಲಂತೂ ತೊರೆ ದಾಟಲಾಗದ ಪರಿಸ್ಥಿತಿಯಲ್ಲಿ ಜನರು ಮಳೆಗಾಲದ ಮೊದಲೇ ಮೂರೂ ನಾಲಕ್ಕು ತಿಂಗಳಿಗಾಗುವಷ್ಟು ದಿನ ನಿತ್ಯದ ಸಾಮಾನುಗಳನ್ನು ತಂದಿದಬೇಕಾಗಿತ್ತು . ಈ ಎಲ್ಲಾ ಕಷ್ಟಗಳ ನಡುವೆ ಬೆಳೆದ ರಂಗನ ಯೋಚನೆಗೆ ಊರ ಕೆಲವರ ಪ್ರೋತ್ಸಾಹ ದೊರೆತಾಗ ತನ್ನ ಮನೆಯ ಜಗುಲಿಯನ್ನು ಅಂಗಡಿಯನ್ನಾಗಿ ಪರಿವರ್ತಿಸುವ ನಿರ್ಧಾರಕ್ಕೆ ಬಂದ ರಂಗ.ಬಂಡವಾಳಕ್ಕಾಗಿ ತನ್ನ ತಂದೆಗೆ ಮಡಿಕೆ ಸರಾಯಿ ಕುಡಿಸಿ ಒಂದು ಎಕರೆ ಭೂಮಿ ಮಾರಿ ರಂಗನ ಅಂಗಡಿಯಂತು ಶುರು ಆಯಿತು.

ಅಂದಿನಿಂದ ಹರಿಹರಪುರದಲ್ಲಿ ಪ್ರಥಮ ದಿನಸಿ ಅಂಗಡಿ ಪ್ರಾರಂಭ ಮಾಡಿ ಜನರ ಕಷ್ಟ ಕಡಿಮೆ ಮಾಡಿದ ರಂಗ ಎಲ್ಲರ ಅಚ್ಚು ಮೆಚ್ಚಿನ ವ್ಯಕ್ತಿಯಾದ. ಸೋಮಾರಿ ಎಂದು ಮೂದಲಿಸುತಿದ್ದವರೆಲ್ಲ ರಂಗನ ಒಡನಾಡಿಗಳಾದರು. ಸುಮಾರು ಆರೇಳು ವರ್ಷಗಳು ಚೆನ್ನಾಗಿಯೇ ವ್ಯಾಪಾರ ಮಾಡಿದ ರಂಗನಿಗೆ ತನ್ನ ತಂದೆ ಇಂದಲೋ, ಗೆಳೆಯರಿಂದಲೋ , ಏನೋ ಗೊತ್ತಿಲ್ಲ ಸಾರಾಯಿ ಕುಡಿಯುವ ಚಟ ಅಂಟಿಕೊಂಡಿತು.ಅದೇ ಆತನ ಅಳಿವಿನ ಆರಂಭ ಎಂದರು ತಪ್ಪಾಗಲಾರದು.ಸಾರಾಯಿ ಅಮಲಿನಲ್ಲಿಯೇ ಬಂದ ಗಿರಾಕಿಗಳಿಗೆ ಐನೂರು ಗ್ರಾಂ ಬದಲು ಒಂದು ಕೆ ಜಿ , ಒಂದು ಕೆ ಜಿ ಕೇಳಿದವರಿಗೆ ಐನೂರು ಗ್ರಾಂ ತೂಗಿ ಕೊಡುವ ಮಟ್ಟಕ್ಕೆ ಹೋದ ರಂಗ.

ವಾಡಿಕೆಯಂತೆ ಮದುವೆ ಮಾಡಿದರೆ ಸರಿ ಹೋದಾನು ಎಂಬುದಾಗಿ ಎಂಬುದಾಗಿ ಊರಿನವರೇ ಅಲ್ಪ ಸ್ವಲ್ಪ ಹಣ ಒಟ್ಟು ಹಾಕಿ ಮದುವೆಯನ್ನು ಮಾಡಿದರು.ರಂಗನೇನೋ ಕುಡಿತ ಕಡಿಮೆ ಮಾಡಿ ಸಮಯಕ್ಕೆ ಸರಿಯಾಗಿ ಮನೆಗೆ ತಲುಪುತಿದ್ದ. ಆದರೆ ಗಯ್ಯಾಳಿ ಹೆಂಡತಿ ಕಮಲನ ದೆಸೆ ಇಂದ ರಂಗ ಸಂಸಾರದ ಜಂಜಾಟದಲ್ಲಿ ನಲುಗಿ ಹೋದ. ಪ್ರತಿ ದಿನವೂ ಮನೆ ರಣರಂಗವಾಗಿರುತಿತ್ತು.ರಂಗನ ಮನಸ್ಸು ಚನಿಯನ ಸಾರಾಯಿ ಅಂಗಡಿಯತ್ತ ಎಳೆಯಲ್ಪಟ್ಟು ಪುನಹಃ ಕುಡಿತದ ದಾಸನಾದ.ಮದುವೆಯಾಗಿ ವರ್ಷ ಪೂರ್ತಿಯಾಗುವ ಮೊದಲೇ ಕಮಲ ಸಾರಾಯಿ ಅಂಗಡಿ ಚನಿಯನೊಡನೆ ಪರಾರಿಯಾಗಿದ್ದಾಳೆ ಎಂಬ ಸುದ್ದಿ ರಂಗನನ್ನು ಇನ್ನಷ್ಟು ದುರ್ಭಲಗೊಳಿಸಿತು. ಅಂಗಡಿಯ ಸ್ಥಿತಿಯೋ ಹೇಳುವಂತಿರಲಿಲ್ಲ.ತಂದು ಹಾಕಿದ ಮಾಲುಗಳು ಕೊಳೆತರು ಅರಿವಾಗುತ್ತಿರಲಿಲ್ಲ ರಂಗನಿಗೆ. ಗಾಯಕ್ಕೆ ಉಪ್ಪು ಸುರಿವಂತೆ ಹರಿಹರಪುರದಲ್ಲಿ ಇಬ್ರಾಹಿಮ್ ಬ್ಯಾರಿ ಶುರು ಮಾಡಿದ ಆಲ್ ಮದಿನಾ ಸ್ಟೋರ್ಸ್.ನಮ್ಮ ರಂಗ ಎಂಬ ಪ್ರೀತಿ, ವಿಶ್ವಾಸದಿಂದ ಅಂಗಡಿಗೆ ಬರುತಿದ್ದವರು ಕೂಡ ಇಬ್ರಾಹಿಮ್ ಬ್ಯಾರಿಯ ಅಂಗಡಿ ಕಡೆ ದಾರಿ ಬದಲಾಯಿಸಿದರು.ಹೊಟ್ಟೆಗೆ ಎಣ್ಣೆ ಸುರಿಯಲಾದರು ಸಿಗುತಿದ್ದ ಆದಾಯಕ್ಕೂ ಕುತ್ತು ಬಿತ್ತು.

ತಂದೆ ಚಿಂಕ್ರನ ಮರಣ ರಂಗನ ಬದುಕಿನಲ್ಲಿ ಮತ್ತೊಮ್ಮೆ ಎದ್ದ ಬಿರುಗಾಳಿ.ತಂದೆಯ ಆಸ್ತಿಯನ್ನು ಮೋಸದಿಂದ ಮಾರಿ ಅಂಗಡಿ ಇಟ್ಟಾಗ ಬೆನ್ನು ಬಗ್ಗಿಸಿ ಹೊಡೆದಾಗ ಕತ್ತಿ ಹಿಡಿದು ತಂದೆಯನ್ನೇ ಕೊಲ್ಲಲು ಮುಂದಾದ ರಂಗ ಚಿಂಕ್ರ ಸತ್ತಾಗ ಹೆಣದ ಮುಂದೆ ತಲೆ ಬಗ್ಗಿಸಿ ದಿನವಿಡಿ ಕೂತಿದ್ದ.ಆತನನ್ನು ಸಮಾಧಾನ ಪಡಿಸಲು ಮುಂದಾದ ರಾಮಕೃಷ್ಣ ಮಾಸ್ಟ್ರಲ್ಲಿ, ಮಾಷ್ಟ್ರೆ , ಅಪ್ಪ ನನ್ನ ಕೊಂದು, ಬದುಕಿ ಬಿಟ್ಟ, ಎಂದು ಮಂಜಾದ ಕಣ್ಣಿಂದ ಆಕಾಶ ದಿಟ್ಟಿಸುತ್ತಾ ನುಡಿದಿದ್ದನಂತೆ. ಸಾಲು ಸಾಲು ಸೋಲುಗಳಿಂದ ಜರ್ಜರಿತನಾದ ರಂಗ ಕೊನೆವರೆಗೂ ಒಬ್ಬಂಟಿಗನಾಗಿ ಬದುಕಿದ.ಬೆಳಿಗ್ಗೆ ಅಂಗಡಿ ಬಾಗಿಲು ತೆರೆದು ಕೂರುತಿದ್ದ. ಕತ್ತಲಾಗುವವರೆಗೆ ಸುಮ್ಮನೆ ಕೂತೂ ಕಾಲ ದೂಡುತಿದ್ದ, ಗಿರಾಕಿಗಳು ಬಂದು ಯಾವುದಾದರು ಸಾಮಗ್ರಿ ಕೇಳಿದಾಗ ತನಗೆ ಮನಸ್ಸಿದ್ದರೆ ಎದ್ದು ಕೊಡುತಿದ್ದ.ಒಂದು ವೇಳೆ ಮನಸಿಲ್ಲದಿದ್ದರೆ ಯಾವುದಾದರೊಂದು ದಿಕ್ಕಿನತ್ತ ದೃಷ್ಟಿಸುತ್ತಾ ಕುರುತಿದ್ದಾ.ಗಿರಾಕಿಗಳು ಬೊಬ್ಬೆ ಹೊಡೆದು ರಂಪಾಟ ಮಾಡಿದರು ಕದಲುತ್ತಿರಲಿಲ್ಲ.ಒಮ್ಮೊಮ್ಮೆ ರಂಗ ಕೇಳಿದ ಸಾಮಗ್ರಿಗಳ ಬದಲು ತನಗೆ ಕೈಗೆ ಸಿಕ್ಕಿದ ಸಾಮಗ್ರಿಯನ್ನೇ ಗಿರಾಕಿಯ ಮುಖಕ್ಕೆ ಎಸೆಯುತಿದ್ದ.ಒಮ್ಮೆ ಜೀಪಿನಲ್ಲಿ ಯಾವುದೋ ಊರಿಂದ ಬಂದ ಕುಟುಂಬದ ಪುಟ್ಟ ಹುಡುಗಿಯೊಬ್ಬಳು ರಂಗನ ಅಂಗಡಿಗೆ ಬಂದು ಪೆಪ್ಪರ ಮಿಟಾಯಿ ಕೇಳಿದಾಗ ಆ ಹುಡುಗಿಯ ಬೆನ್ನು ಬಗ್ಗಿಸಿ ನಾಲ್ಕು ಗುದ್ದಿದ್ದ.ಅಲ್ಲೇ ಜೀಪಿನ ಬಳಿ ಇದ್ದ ಹುಡುಗಿಯ ಕುಟುಂಬಿಕರು ಹಿಗ್ಗಾ ಮುಗ್ಗ ಹೊಡೆದಿದ್ದರು ಒಂದು ತೊಟ್ಟು ಕಣ್ಣೀರಿಟ್ಟವನಲ್ಲ ರಂಗ.ಹಸಿವಾದರೆ ಅನ್ನ ಬೇಯಿಸಿಕೊಂಡು ತಿನ್ನುತಿದ್ದ.ಇಲ್ಲವಾದರೆ ಪಕ್ಕದ ವಾರಿಜಕ್ಕನ ಅಡುಗೆ ಮನೆಯಲ್ಲಿ ತಿನ್ನಲು ಏನಾದರು ಕೊಡುವವರೆಗೆ ಕುಕ್ಕರುಗಾಲಿನಲ್ಲಿ ಕೂತು ಬಿಡುತಿದ್ದ. 

ಈ ರೀತಿ ಬದುಕಿನುದ್ದಕ್ಕೂ ಎಲ್ಲವನ್ನು ಸೋಲಿನಿಂದಲೇ ಎದುರಿಸಿದ ರಂಗನನ್ನು ನೋಡಿ ಮಾನಸಿಕ ಅಸ್ತಿತ್ವವನ್ನು ಕಳೆದುಕೊಂಡ ಹುಚ್ಚ ಎಂದು ನಾನೆಂದು ಹೇಳಲಾರೆ. ಏಕೆಂದರೆ ರಂಗನ ಬದುಕಿನ ಒಂದೆರಡು ರೋಚಕ ವಿಚಾರಗಳನ್ನು ನೀವು ಕೂಡ ತಿಳಿದರೆ ರಂಗನನ್ನು ಹುಚ್ಚ ಎನ್ನಲು ತಡವರಿಸುತ್ತೀರಿ.ರಂಗ ಬದುಕಿದ್ದಷ್ಟು ವರ್ಷ ಆಗಷ್ಟ್ ಹದಿನೈದರ ಸ್ವಾತಂತ್ರ್ಯೋತ್ಸವ ದಿನದಂದು ಶಾಲಾ ಮಕ್ಕಳಿಗೆ ಪೆಪ್ಪರ್ ಮಿಟಾಯಿ ಹಂಚುವದನ್ನು ಮರೆತವನಲ್ಲ.ದಿನಾ ಬೆಳಿಗ್ಗೆ ರೇಡಿಯೋ ದಲ್ಲಿ ಪ್ರಸರವಾಗುತಿದ್ದ ವಾರ್ತೆಗಳನ್ನು ರಂಗ ತಪ್ಪದೆ ಕೇಳುತಿದ್ದ, ಇನ್ನೊಂದು ರೋಚಕ ಸಂಗತಿ ಎಂದರೆ ರಂಗನನ್ನು ಮಕ್ಕಳೇನಾದರು ರಂಗಜ್ಜ ಎಂದು ಕರೆದರೆ ಸಿಡುಕುತ್ತಾ,ನಾನೇನೂ ಅಜ್ಜನಲ್ಲ ಎಂದು ಕೈಗೆ ಸಿಕ್ಕ ವಸ್ತುವನ್ನು ಎಸೆಯುತಿದ್ದ.ಅದ್ದರಿಂದ ನಾನಾಗಲೇ ರಂಗನನ್ನು ತರುಣ ಎಂದು ಪರಿಚಯಿಸಿದ್ದು.

ರಂಗನು ಕೂಡ ವಿದಿಯಾಟದಲ್ಲಿ ಪುನಹಃ ಸೋತ.ಈ ಸೋಲು ರಂಗನ ದೃಷ್ಟಿಯಲ್ಲಿ ಗೆಲುವು.ತಂದೆ ತೀರಿಕೊಂಡಾಗ ಬದುಕಿ ಬಿಟ್ಟೆ ಎಂದ ರಂಗ ಅದೊಂದು ದಿನ ತಾನು ಕೂಡ ಅಂಗಡಿಯ ಗಲ್ಲಾದ ಮೇಲೆ ಬದುಕಿಬಿಟ್ಟ.ಹಿಂದೂ ಮುಂದೂ ಇಲ್ಲದ ರಂಗನ ಮದುವೆ ಮಾಡಿಸಿ ಕೂಪಕ್ಕೆ ದೂಡಿದ ಊರವರ ನೇತ್ರತ್ವದಲ್ಲಿ ಆತನ ಅಂತಿಮ ಕ್ರಿಯೆಗಳು ನಡೆದವು. ಇವತ್ತಿಗೂ ನನಗೆ ಹರಿಹರಪುರದ ಬಸ್ ಸ್ಟ್ಯಾಂಡ್ ನತ್ತ ನಡೆಯುವಾಗ ರಸ್ತೆ ಬದಿಯಲ್ಲಿ ರಂಗನ ನೆನಪಿಗಾಗಿ ಉಳಿದಿರುವ ಅಂಗಡಿಯ ಕಟ್ಟಡ ಆತನ ಬದುಕಿನ ಪುಟಗಳನ್ನೂ ತೆರೆದಿಟ್ಟಂತೆ ಭಾಸವಾಗುತ್ತದೆ,ನಾನೊಮ್ಮೆ ರಂಗನನ್ನು ರಂಗಜ್ಜ ಎಂದಾಗ ಕೈಯಲ್ಲಿದ್ದ ಕೋಲನ್ನು ನನ್ನತ್ತ ಎಸೆದಾಗ ಓಡಿ ಕೆಸರು ಗುಂಡಿಯಲ್ಲಿ ಬಿದ್ದ ನೆನಪು ಚಿಗುರೊಡೆಯುತ್ತದೆ.ಮತ್ತೊಮ್ಮೆ ರಂಗನೆ ಕೋಲು ಹಿಡಿದುಕೊಂಡು ನನ್ನ ಅಟ್ಟಿಸಿಕೊಂಡು ಬಂದಂತೆ ಭಾಸವಾಗುವದು ಸುಳ್ಳಲ್ಲ.
-ವಿಘ್ನೇಶ್ ತೆಕ್ಕಾರ್.

******************************************