Sunday 1 January 2012

ಹೂವೊಂದು ನಗುವಂತಿದೆ

ಹೂವೊಂದು ನಗುವಂತಿದೆ
ಮುಗಿಲ ರವಿಕಿರಣವ ನೋಡಿ
ಗಿಡವೊಂದು ಅಳುವಂತಿದೆ
ಬುಡಕ್ಕೆ ಹತ್ತಿರುವ ಹುಳುವ ನೋಡಿ

ತಾಯೊಂದು ಕಣ್ಣೀರಿಡುವಂತಿದೆ
ಇಹವ ತೊರೆದ ಮಗುವ ನೆನೆದು
ಕೂಸೊಂದು ಕುಣಿವಂತಿದೆ
ಅಮ್ಮನಪ್ಪುಗೆಯ ಬಿಸಿಯನ್ನು ನೆನೆದು

ನದಿಯೊಂದು ಮಾರ್ದನಿಸುವಂತಿದೆ
ಅಗಾಧ ಕಡಲಲ್ಲಿ ಲೀನವಾಗುವ ಕುರಿತು
ಕಡಲೊಂದು ಮೊರೆವಂತಿದೆ
ನನ್ನೊಳಗೆ ಸತ್ತ ನದಿಗಳ ಕುರಿತು

ದನವೊಂದು ಗೊಗರೆವಂತಿದೆ
ಹಾಲ ಹಿಂಡುವ ಮಾನವನ ತಿವಿದು
ಕರುವೊಂದು ಜಿಗಿವಂತಿದೆ
ಕೆಚ್ಚಲು ಹಾಲ ಸಿಹಿ ನೆನೆದು

ಬದುಕೊಂದು ಗಹಗಹಿಸುವಂತಿದೆ
ಕಳೆದು ಅಳುವವರ ನೋಡಿ
ಮನುಷ್ಯನೊಬ್ಬ ಮರುಗುವಂತಿದೆ
ಕೈಯಲ್ಲಿದ್ದ ಬದುಕ ಕಳೆದವರ ನೋಡಿ.





















1 comment: