ಧರ್ಮ ನಮಗೆಲ್ಲರಿಗೂ ಗುರುತಿನ ಚೀಟಿ ಇದ್ದಂತೆ. ಆತ ಹಿಂದೂ, ಇತ ಮುಸಲ್ಮಾನ, ಆಕೆ ಕ್ರಿಶ್ಚಿಯನ್ ಹೀಗೆ ಇಂದು ಧರ್ಮ ನಮ್ಮ ಐಡೆಂಟಿಟಿಯಾಗಿದೆ. ಧರ್ಮದ ಪ್ರಾಥಮಿಕ, ಮೂಲಭೂತ ವಿಚಾರಗಳು, ವಿಧಿ-ವಿಧಾನಗಳು ಎಂದೋ ತುಕ್ಕು ಹಿಡಿದು ನಮ್ಮಿಂದ ದೂರವಾಗಿದೆ. ಧರ್ಮ ಕೇವಲ ಗುರುತು ಮತ್ತು ಕಲಹವೆಬ್ಬಿಸಲು ಮಾತ್ರ ಉಪಯೋಗಿಸಲ್ಪಡುವ ವಸ್ತುವೆಂಬುದಾಗಿ ಅರ್ಥೈಸಿಕೊಂಡ ಜನರು ಸಮಾಜದಲ್ಲಿ ರಾಡಿ ಎಬ್ಬಿಸಲು ಶುರುವಾಗಿ ದಶಕಗಳೇ ಕಳೆದಿವೆ.
ಸಂಘರ್ಷ ಮತ್ತು ಧರ್ಮಗಳೆರಡನ್ನು ನೋಡುವ ದೃಷ್ಟಿಕೋನಗಳು ಅನೇಕವಿದೆ. ಅವುಗಳಲ್ಲೆರಡು ಪ್ರಮುಖವಾದುದು. ಧರ್ಮವನ್ನು ಕೋಳಿ ಎಂದು ಮತ್ತು ಸಂಘರ್ಷ ಅ ಕೋಳಿಯ ಮೊಟ್ಟೆ ಎಂದು ಕಾಣುವ ಇಂದಿನ ಕ್ರಾಂತಿಕಾರಿ ದೃಷ್ಟಿಕೋನ ಮತ್ತು ಸಂಘರ್ಷವನ್ನು ರೋಗ ಮತ್ತು ಧರ್ಮ ಅದನ್ನು ಗುಣಪಡಿಸುವ ಮದ್ದು ಎಂದು ಪರಿಗಣಿಸುವ ಕಲಹಗಳಿಂದಾಗುವ ನಷ್ಟದ ಬಗ್ಗೆ ತಲೆಕೆಡಿಸಿಕೊಂಡವರ ದೃಷ್ಟಿಕೋನ. ಯಾವತ್ತು ಧರ್ಮದಿಂದ ಪರಸ್ಪರ ಅಥವಾ ಅನ್ಯಧರ್ಮಿಯರ ಮಧ್ಯ ಸಂಘರ್ಷಗಳು ಏರ್ಪಡುವುದಿಲ್ಲ ಬದಲಾಗಿ ರ್ಮದ ದುರುಪಯೋಗ ಅಥವಾ ಧರ್ಮವನ್ನು ತಪಾಗಿ ಅರ್ಥೈಸಿಕೊಂಡವರ ಪರಿಣಾಮ ಮಾತ್ರ ನಮ್ಮ ಯುವಕರನ್ನು ಸಂಘರ್ಷದತ್ತ ತಳ್ಳುತ್ತದೆ.
ಒಂದೆರಡು ವಿಚಾರಗಳು ನಾನಿಲ್ಲಿ ಪ್ರಸ್ತಾಪಿಸುವುದು ನಮ್ಮ ಧಾರ್ಮಿಕತೆಗೆ ಸಂಬಂಧಪಟ್ಟದ್ದು. ಹಿಂದೊಂದು ಕಾಲವಿತ್ತು. ನಮ್ಮ ಪೂರ್ವಿಕರೆಲ್ಲಾ ಅತೀ ಧಾರ್ಮಿಕರಾಗಿದ್ದ ಕಾಲವೊಂದಿತ್ತು. ಪ್ರತೀ ಧರ್ಮದ ಅನುಯಾಯಿಗಳು ತಮ್ಮ ಧರ್ಮದಲ್ಲಿನ ವಿಧಿ-ವಿಧಾನ, ಅಚಾರ-ವಿಚಾರಗಳನ್ನು ತಪ್ಪದೇ ಪಾಲಿಸುತ್ತಿದ್ದ ಕಾಲ. ಧರ್ಮದ ಬಗ್ಗೆ ಆಳವಾಗಿ ಅರಿತುಕೊಂಡು ಹೆಚ್ಚು ಧಾರ್ಮಿಕರಾಗಿ ಬದುಕುತ್ತಿದ್ದ ಕಾಲ. ಆದರೆ ಅನ್ಯ ಧರ್ಮಗಳೊಂದಿಗೆ ಎಂದೂ ಕಾದಾಡಿದವರಲ್ಲ. ಅಕ್ಬರನ ಆಸ್ಥಾನದಲ್ಲಿ ಬೀರಬಲ್ಲನಿಗೆ ಮುಸಲ್ಮಾನರಿಗಿಂತ ಹೆಚ್ಚು ಗೌರವ ಸಿಗುತ್ತಿತು ಎನ್ನುವುದೇ ನಾವು ನೀವು ಓದಿದ ಉದಾಹರಣೆ.
ಹಾಗಾದರೆ ನಮ್ಮಲ್ಲಿ ಕಡಿಮೆಯಾಗುತ್ತಿರುವ ಧಾರ್ಮಿಕತೆ ನಮ್ಮನ್ನು ಅಧರ್ಮಿಯರನ್ನಾಗಿಸುತ್ತದೆಯೇ.....? ಯೋಚಿಸಬೇಕಾದ ವಿಚಾರ. ನನ್ನ ಪ್ರಕಾರ ಹೌದು. ಇವತ್ತು ಅನ್ಯ ಧರ್ಮಿಯರ ಅಸ್ತಿತ್ವವೇ ನಮ್ಮ ಅವನತಿಯೆಂದು ಭಾವಿಸಿ ಅ ಧರ್ಮದ ನಿರ್ನಾಮವನ್ನು ಬಯಸುವವರು ತಮ್ಮ ಅಥವಾ ತಾವು ಅನುಸರಿಸಬೇಕಾದ ಧರ್ಮದ ಪ್ರಾಥಮಿಕ ಮತ್ತು ಮೂಲಭೂತ ವಿಚಾರಗಳ, ವಿಧಿ-ವಿಧಾನಗಳು, ಬಗ್ಗೆ ಅನಕ್ಷರಸ್ಥರಾಗಿರುತ್ತಾರೆ. ಆದರೆ ತಮ್ಮ ಧರ್ಮದ ಶತ್ರುಗಳೆಂದು ಕಾಣುವ ಅನ್ಯ ಧರ್ಮದ ದೋಷಗಳ ಬಗ್ಗೆ ಬರೆಯಲು, ಹಳಿಯಲು ಒಂದು ಮಹಾ ಪ್ರಬಂಧಕ್ಕಾಗುವಷ್ಟು ಮಾಹಿತಿಗಳಿರುತ್ತವೆ. ಇದು ಧರ್ಮದ ದುರುಪಯೋಗ. ಇದು ತನ್ನದಲ್ಲದ ಇನ್ನೊಂದು ಧರ್ಮದ ಬಗ್ಗೆ ದ್ವೇಷ ದಳ್ಳುರಿಯನ್ನು ಹುಟ್ಟಿಸುವ ಭಾವನೆಗಳು ಇಂದಿನ ಧಾರ್ಮಿಕ ಮುಖಂಡರ ಮತ್ತು ರಾಜಕೀಯ ಶಕ್ತಿಗಳು ನಮ್ಮ ಯುವಕರಿಗೆ ಚಮಚದಲ್ಲಿ ತಿನ್ನಿಸುವ ಜಾಮುನಂತಾಗಿದೆ. ಕೆಲವು ಧಾರ್ಮಿಕ ಮುಖಂಡರುಗಳು ಸರ್ವಧರ್ಮ ಸಮ್ಮೇಳನಗಳ ವೇದಿಕೆಯಲ್ಲೇ ತಮ್ಮ ಧರ್ಮವೇ ಹೆಚ್ಚು ಸಹಿಷ್ಣು ಎನ್ನುವ ಬರದಲ್ಲಿ ತಾವೇ ಅಸಹಿಷ್ಣುಗಳಾಗುವ ಸಂದರ್ಭಗಳು ಹೊಸತೇನಲ್ಲ.
ಧರ್ಮ ಯಾವತ್ತು, ಯಾರನ್ನು, ನೀನು ಇತರ ಧರ್ಮದ ವಿಚಾರದಲ್ಲಿ ಅಧರ್ಮಿಯಾಗು ಎಂದು ಎಲ್ಲಿಯೂ ಬೋಧಿಸುವುದಿಲ್ಲ. ಜಗತ್ತಿನ ಎಲ್ಲಾ ಧರ್ಮಗಳ ಬೋಧನೆಗಳು ಶಾಂತಿ, ಸಹನೆ, ಅಹಿಂಸೆ, ಪ್ರೀತಿ ಮತ್ತು ಇತರ ಕೆಲವು ಸಮಾಜಮುಖಿಯಾದ ಚಿಂತನೆಗನ್ನಷ್ಟೇ ಹೇಳುತ್ತವೆ. ಯಾವುದೇ ಧಾರ್ಮಿಕ ಕೇಂದ್ರಗಳು ನೀನು ಅನ್ಯಧರ್ಮಿಯರನ್ನು ಹಿಂಸಿಸಿದರೆ ಮಾತ್ರ ನಿನಗೆ ದೇವಾಲಯ, ಮಸೀದಿ, ಚರ್ಚುಗಳಿಗೆ ಪ್ರವೇಶವೆಂಬ ಕಟ್ಟುಪಾಡುಗಳೆನ್ನಿಲ್ಲ. ಹೀಗೆ ಧರ್ಮ ಎಂದು ಸಂಘರ್ಷಕ್ಕೆ ಕಾರಣವಾಗುವುದಿಲ್ಲ. ಒಂದು ವೇಳೆ ಧರ್ಮವೇ ಕಲಹದ ಕಾರಣವಾಗಿದ್ದರೆ ಧರ್ಮದ ಅಸ್ತಿತ್ವದ ಶುರುವಿನಿಂದಲೇ ಸಂಘರ್ಷದ ಬೇಗೆಯಲ್ಲಿ ಬೇಯಬೇಕಿತ್ತು. ಇತಿಹಾಸದ ಪ್ರತಿ ಘಟ್ಟದಲ್ಲಿ ಧರ್ಮಸಂಘರ್ಷದ ಕುರುಹುಗಳು ಸಿಗಬೇಕಿತ್ತು.
ಧರ್ಮ ನನ್ನ ಪ್ರಕಾರ ತೀರಾ ಖಾಸಗಿ ವಿಚಾರ. ಅವರವರ ವಿಚಾರ, ಆಸಕ್ತಿ, ಭಾವಕ್ಕೆ ಸಂಬಂಧಪಟ್ಟದ್ದು. ಒಂದು ಧರ್ಮದಿಂದ ಇನ್ನೊಂದು ಧರ್ಮಕ್ಕೆ ಮತಾಂತರವಾಗುವ ಇಚ್ಚೆ ಆತನ ವೈಯಕ್ತಿಕತೆಗೆ ಸಂಬಂಧಪಟ್ಟದ್ದಾಗಿರಬೇಕು. ಹೊರತು ಬಲವಂತಕ್ಕೆ ಮಣಿದು, ಆಮಿಷಗಳ ಮೂಲಕ ಅಥವಾ ಬೆದರಿಕೆಗಳಿಗೆ ಬಗ್ಗುವಂತದ್ದಾಗಬಾರದು. ಧರ್ಮದ ಒಳ್ಳೆ ವಿಚಾರಗಳು ಬದುಕಿನ ನಡೆಗೆ ಪೂರಕವಾಗುವವು, ಅವನ್ನು ಬದುಕಿಗೆ ಅಳವಡಿಸಿಕೊಳ್ಳಿ. ಧರ್ಮದ ಬಗ್ಗೆ ಪರಿಪೂರ್ಣ ತಿಳಿದುಕೊಳ್ಳಿ. ಸಾಧ್ಯವಾಗದಿದ್ದರೆ ಧರ್ಮದ ಸಂಘರ್ಷಕ್ಕೆ ಕಾರಣರಾಗಬೇಡಿ. ಧರ್ಮ ದೇವರುಗಳಲ್ಲಿ ನಂಬಿಕೆ ಇರದಿದ್ದರೂ ಮಾನವ ಧರ್ಮದಲ್ಲಿ ವಿಶ್ವಾಸ ಬೆಳೆಸಿಕೊಳ್ಳಿ. ನಾನು ಪಾಲಿಸುವ ಧರ್ಮವು ಅದೇ. ನಮ್ಮ ಧರ್ಮದ ಅಳತೆಗೋಲುಗಳ ಬಣ್ಣ ಕೇಸರಿ, ಹಸಿರು, ಬಿಳಿಗಳಿರಬಹುದು ಆದರೆ ನಮ್ಮ ಮಾನವ ಧರ್ಮದ ಬಣ್ಣ ಕೆಂಪು. ಅದು ನಮ್ಮ ನಿಮ್ಮ ಜೀವ ದ್ರವ ರಕ್ತ.
No comments:
Post a Comment