"ನಾ ಹೊಂಟಿನ್ರಿ ನಮ್ಮ ಊರಿಗೆ, ಇನ್ನೊಂದು ಬಾರಿ ನಿಮ್ಮ್ ಮನಿಯಾಗ ಕುಂಡಲಕ್ಕ ಬರ್ತಿನ್ರಿ" ಇದು ನನ್ನ ವಿದ್ಯಾರ್ಥಿಗಳು ಬೀದರ್ ಜಿಲ್ಲೆಯ ಹಳ್ಳಿಗಳಲ್ಲಿನ ಒಂದು ವಾರದ ಗ್ರಾಮ ವಾಸ್ತವ್ಯ ಶಿಬಿರವನ್ನು ಮುಗಿಸಿಕೊಂಡು ತಮ್ಮೂರಿಗೆ ಹಿಂದಿರುಗುವ ಸಮಯದಲ್ಲಿ ಇನ್ನೂ ನಮ್ಮ ಹಳ್ಳಿಗಳಲ್ಲಿ ತಂಗುವಂತೆ ಒತ್ತಾಯಿಸುತ್ತಿದ್ದ ಸಂದರ್ಭದಲ್ಲಿ ಹಳ್ಳಿಗರನ್ನು ಸಮಾಧಾನಿಸಿದ ಮಾತುಗಳಿವು. ರಾಷ್ಟ್ರೀಯ ಸೇವಾ ಯೋಜನೆಯ ಸ್ವಯಂ ಸೇವಕನಾಗಿದ್ದ ನನಗೆ ಹಲವು ಇಂತಹ ಶಿಬಿರಗಳ ಅನುಭವವಿದೆ. ಹಿಂದೆ ಬರುವಾಗ ಅತ್ತು ಮನಸ್ಸು ಭಾರವಾಗಿಸಿಕೊಂಡು ಬಂದದ್ದು ಇದೆ. ಆದರೆ ಈ ಬಾರಿ ನನ್ನ ಅನುಭವವೆ ಭಿನ್ನವಾದುದು. ಅದೆ ಶಿಭಿರಾಧಿಕಾರಿಯಾಗಿ.
ಈ ಸಾಲಿನ ನಮ್ಮ ವಿಭಾಗದ ಗ್ರಾಮ ವಾಸ್ತವ್ಯ ಶಿಬಿರಕ್ಕಾಗಿ ನಾವು ಆರಿಸಿದ ಸ್ಥಳ ಕರ್ನಾಟಕದ ತುತ್ತತುದಿಯಲ್ಲಿರುವ ಹಿಂದುಳಿದ ಜಿಲ್ಲೆಗಳಲ್ಲಿ ಒಂದಾದ ಬೀದರ್ ಜಿಲ್ಲೆಯ ಭಾಲ್ಕಿ ತಾಲೂಕು. ಅತ್ತ ಹೊರಳಿದರೆ ಆಂಧ್ರ ಪ್ರದೇಶ, ಇತ್ತ ಇಣುಕಿದರೆ ಮಹಾರಾಷ್ಟ್ರ. ಇಂತಹ ಗಡಿನಾಡಾದರು ಸಂಸ್ಕೃತಿ , ಅಚಾರ ವಿಚಾರ, ರೀತಿ ನೀತಿ, ಜನಜೀವನ, ಬದುಕು ಎಲ್ಲವೂ ಅಪ್ಪಟ ಕನ್ನಡ, ಕರ್ನಾಟಕದ್ದೆ. ಹಿಂದಿ, ಮರಾಠಿ, ತೆಲುಗುಗಳಿಂದ ಹೆಚ್ಚು ಪ್ರಭಾವಿತವಾಗಿದ್ದರು ಕನ್ನಡವೆ ಆಡುಭಾಷೆ. ಬಹುತೇಕ ಜನ ಮೂಲ ಸೌಲಭ್ಯಗಳಾದ ವಸತಿ, ಶಿಕ್ಷಣ, ಶುದ್ದ ಕುಡಿಯುವ ನೀರು ಮುಂತಾದವುಗಳಿಂದ ವಂಚಿತರಾಗಿದ್ದಾರೆ ಎಂದು ನಮಗನಿಸಿದರೂ, ಅವು ತಮ್ಮ ಅಗತ್ಯವೆಂಬ ಭಾವ ಬಾರದ ನೆಮ್ಮದಿಯ ಜೀವನ ಅವರದ್ದು. ಮುಂಗಾರಿನಲ್ಲಿ ತಮ್ಮ ಹೊಲಗಳಲ್ಲಿ ಕಬ್ಬು, ಜೋಳ, ಮುಂತಾದವುಗಳನ್ನು ನಂಬಿಕೊಂಡಿರುವವರು ನಂತರದ ದಿನಗಳಲ್ಲಿ ಕೂಲಿಗಾಗಿ ಹೈದರಾಬಾದ್, ಮುಂಬಾಯಿ, ಪೂನಗಳತ್ತ ಮುಖಮಾಡುವುದು ಸಾಮಾನ್ಯ. ಹಳ್ಳಿಗಳು ಜಾತಿ ವ್ಯವಸ್ಥೆ, ಮೂಢನಂಬಿಕೆ, ಭಾನಮತಿ, ಬಾಲ್ಯವಿವಾಹ, ವರದಕ್ಷಿಣೆ, ಅನೈತಿಕ ಸಂಬಂಧಗಳು ಇಂತಹ ಹಲವು ಸಾಮಾಜಿಕ ಪಿಡುಗುಗಳಿಂದ ಬೇಯುತ್ತಿದ್ದರು ತಮ್ಮ ಊರುಗಳಿಗೆ, ಮನೆಗಳಿಗೆ ಬರುವವರನ್ನೆಲ್ಲಾ ವಿಶಾಲ ಮನಸ್ಸಿನಿಂದ ಬರಮಾಡಿಕೊಳ್ಳುವ ಸತ್ಕರ್ಮ ಅವರದ್ದು. ಕೆಲವು ಹಳ್ಳಿಗಳಂತೂ ಭಾಲ್ಕಿಯನ್ನೊ, ಬಸವಕಲ್ಯಾಣವನ್ನೊ ನೋಡಬೇಕಾದರೆ ಅಪ್ಪಿ ತಪ್ಪಿ ದಿನಕ್ಕೊಮ್ಮೆ ಮುಖ ತೋರಿಸುವ ಈಶಾನ್ಯ ಕರ್ನಾಟಕ ಸಾರಿಗೆಯ ಬಸ್ಸು ಅಥವಾ ಕುರಿ ತುಂಬಿದಂತೆ ಜನ ತುಂಬಿಕೊಂಡು ತೂರಾಡುತ್ತಾ ಸಾಗುವ ಟಂ ಟಂ, ಕ್ರೂಸರ್, ಅಟೋ, ಜೀಪುಗಳಂತಹ ಸ್ಥಳೀಯ ಸಾರಿಗೆಯನ್ನೇ ಅವಲಂಬಿಸಬೇಕು. ಇಂತಹ ಹಳ್ಳಿಗಳಲ್ಲಿ ನಮ್ಮ ಒಂದು ವಾರದ ವಾಸ್ತವ್ಯ.
ಉಡುಪಿ, ದಕ್ಷಿಣ ಕನ್ನಡದಂತಹ ಮುಂದುವರಿದ ಜಿಲ್ಲೆಗಳಲ್ಲಿ ಈ ಮೇಲಿನ ಗುಣಲಕ್ಷಣಗಳಿರುವ ಹಳ್ಳಿಗಳು ಬಹುತೇಕ ನೇಪರ್ಥ್ಯಕ್ಕೆ ಸೇರಿವೆ. ಸಾರಿಗೆ, ರೋಡುಗಳು, ಜನ ಮಾನಸದ ಮಸ್ತಕದಲ್ಲಿನ ಜ್ಞಾನ, ಶಿಕ್ಷಣ ಎಲ್ಲವೂ ಹೆಚ್ಚಾದಂತೆ ನಮ್ಮವರೆಲ್ಲ ಹಳ್ಳಿಗಳಿಗೆ ಮುಖ ತಿರುಗಿಸಿ ನಗರ ಸೇರಿಯಾಗಿದೆ. ಹಳ್ಳಿಗಳು ಕೂಡಾ ಮುಂದುವರಿಯುತ್ತಿರುವ ಅವಿಭಜಿತ ದಕ್ಷಿಣ ಕನ್ನಡದ ಜನ ನಿಜವಾದ ಹಳ್ಳಿಗಳ ಜೀವನವನ್ನು ಅನುಭವಿಸಲು, ನೋಡಲು ತೆರಳುವುದು ಉತ್ತರ ಕರ್ನಾಟಕದತ್ತ. ಅಂತೆಯೇ ನನ್ನ ಸಾರಥ್ಯದ ಸುಮಾರು ಇಪ್ಪತ್ತೆರಡು ಯುವಕರ ಗುಂಪು ಹಳ್ಳಿಗಳ ಪರಿಸ್ಥಿತಿಯನ್ನು ಅವಲೋಕಿಸಲು ಮತ್ತು ಅರ್ಥೈಸಿಕೊಳ್ಳಲು ಬೀದರ್ ನತ್ತ ಹೊರಟದ್ದು ರಿಬಾಕ್ ಶೂ ತೊಟ್ಟು.(ಆಮೇಲೆ ಶೂ ಬಿಚ್ಚಿಸುವಲ್ಲಿ ಯಶಸ್ವಿಯಾಗಿದ್ದೇನೆ).
ನಮ್ಮ ಗುಂಪಲ್ಲಿ ಅಂತಹ ಆಗರ್ಭ ಶ್ರೀಮಂತರ ಕುಟುಂಬದಿಂದ ಬಂದವರಿಲ್ಲದಿದ್ದರೂ, ಹೊಂದಿಕೊಳ್ಳುವ ಗುಣ ನಮ್ಮವರದ್ದಾಗಿದ್ದರೂ ಕೆಲವು ಸಮಸ್ಯೆಗಳು ನಮ್ಮ ವಿದ್ಯಾರ್ಥಿಗಳನ್ನು ಕಾಡಿತ್ತು ಬೀದರ್ ನ ಹಳ್ಳಿಗಳಲ್ಲಿ. ಮೊದಲನೆ ಸಮಸ್ಯೆ ಶೌಚಾಲಯ. ಬೆಳಿಗ್ಗೆ ಎದ್ದು ಯಾವ ಕಡೆ ಅನ್ನೋದೆ ಸಮಸ್ಯೆಯಾಗಿತ್ತು ನೋಡಿ. ಒಂದು ಒಳ್ಳೆ ತಮಾಷೆಯ ಘಟನೆ ನಾನಿಲ್ಲಿ ಹಂಚಿಕೊಳ್ಳಲೇಬೇಕು. ನಮ್ಮ ಗುಂಪಿನ ಓರ್ವ ಹುಡುಗ ಹಿಂದಿನ ದಿನ ರಾತ್ರಿ ಹಳ್ಳಿಗರನ್ನೆಲ್ಲಾ ಒಟ್ಟುಗೂಡಿಸಿ ಸ್ವಚ್ಚತೆ ಬಗ್ಗೆ ಘಂಟೆಗಟ್ಟಲೆ ಭಾಷಣ ಬಿಗಿದಿದ್ದ. ಅದೃಷ್ಟವಷಾತ್ ಆತ ಉಳಿದುಕೊಂಡ ಮನೆಯಲ್ಲಿ ಶೌಚಾಲಯವೆ ಇರಲಿಲ್ಲ. ಯಾರದ್ರು ನೋಡೊ ಮೊದ್ಲು ಬೆಳಿಗ್ಗೆ ಬೇಗ ಎದ್ದು ಎಲ್ಲ ಮುಗಿಸಿಕೊಂಡು ಬರುವ ಯೋಜನೆಯಂತೆ ಕೈಯಲ್ಲಿ ನೀರು ಹಿಡಿದು ಹೊರಟವನಿಗೆ ಯಾವ ಜಾಗವೂ ಸರಿ ಕಾಣದೆ ನಡೆದು ನಡೆದು ಸುಮಾರು ಮೂರು ಕಿ.ಮಿ. ಹೋಗಿ ಪ್ರಶಸ್ತವಾದ ಜಾಗವೆನಿಸಿದ ಕಡೆ ಕೂತಾಗ ಹಿಂದಿನ ರಾತ್ರಿ ಈತನ ಭಾಷಣಕ್ಕೆ ಬಂದಿದ್ದವನೊಬ್ಬ ಪಕ್ಕದಲ್ಲೇ ತನ್ನ ಕರ್ಮಾದಿ ತೊಡಗಿದ್ದವ ಎದ್ದು ನಿಂತು ನಮಸ್ಕಾರ ಸಾರ್ ಅನ್ನಬೇಕೆ. ಈ ಘಟನೆ ನಮಗೆಲ್ಲರಿಗೂ ಹಾಸ್ಯಕ್ಕೊಂದು ವಸ್ತುವಾಗಿರಬಹುದು, ಆದರೆ ಅವನ ಮನಸ್ಸಿನಲ್ಲಾಗಿರಬಹುದಾದ ಗೊಂದಲಗಳಿಗೆ ಲೆಕ್ಕವಿರಲಿಕ್ಕಿಲ್ಲ.
ಇನ್ನೊಂದು ಸಮಸ್ಯೆ ಭಾಷೆ. ಉಡುಪಿ ಮಂಗಳೂರಿನ ಜನರ ಭಾಷೆ ಪುಸ್ತಕದ ಭಾಷೆ ಎಂಬುದಾಗಿ ಇತರ ಪ್ರದೇಶದ ಜನ ಅಡಿಕೊಳ್ಳುವುದಕ್ಕು, ನಾವು ಮಾತನಾಡುವ ರೀತಿಯು ಸರಿ ಹೊಂದುತ್ತದೆ. ನಮ್ಮ ವಿದ್ಯಾರ್ಥಿಗಳು ಮಾತಾಡುವ ಭಾಷೆ ಹಳ್ಳಿಗರಿಗೆ ಅರ್ಥ ಮಾಡಿಕೊಳ್ಳಲು ಕಷ್ಟ, ಇನ್ನೂ ನಮ್ಮ ಪರಿಸ್ಥಿಯ ಬಗ್ಗೆ ಕೇಳಬೇಡಿ. ಒಂದು ಹಳ್ಳಿಯಲ್ಲಿ ನಡೆಯುತ್ತಿದ್ದ ಜಗಳ ನೋಡಿ ನಿಬ್ಬೆರಗಾದ ನಮ್ಮ ಹುಡುಗರು ತಪ್ಪಿಯಾದರು ಜನರಿಂದ ಬೈಗುಳ ತಿನ್ನದೆ ತಮ್ಮ ಕೆಲಸಗಳನ್ನು ಮುಗಿಸಿಕೊಂಡು ಬಂದರೆ ಸಾಕಪ್ಪ ಎಂದುಕೊಂಡಿರಬಹುದು. ಜಗಳದಲ್ಲಿ ಸಿಲುಕಿಕೊಂಡಿರುವವರು ಹತ್ತು ತಲೆಮಾರಿನ ಬಗ್ಗೆ ಮಹಾ ಪ್ರಬಂಧ ಬರೆಯಲು ಬೇಕಾದಷ್ಟು ಮಾಹಿತಿ ಈ ಜಗಳದಲ್ಲಿ ಸಿಗುವಂತಿರುತ್ತದೆ.
ನಾವೆಲ್ಲಾ ಅನ್ನ ಅದರಲ್ಲೂ ಕುಚ್ಚಲು ಅನ್ನವನ್ನು ತಿನ್ನುವರರಿಗೆ ಒಮ್ಮೆಲೆ ಅರ್ಧ ತಾಸು ಜಗಿದರೂ ಕರಗದ ಜೋಳದ ರೊಟ್ಟಿಯ ತಿಂದು ಅರಗಿಸೋದು ಇನ್ನೊಂದು ಸಮಸ್ಯೆ. ನಮ್ಮವರು ರೊಟ್ಟಿ ಮತ್ತು ಕಾಳಿನ ಪಲ್ಯಕ್ಕೆ ಮನಸೋತಿದ್ದರೂ ಅರಗಿಸಿಕೊಳ್ಳುವುದೇ ಸಮಸ್ಯೆಯಾಗಿ ಬಿಟ್ಟಿತ್ತು. ಇನ್ನೂ ಅಗ್ಗವಾಗಿ ಸಿಗುವ ಬಾಳೆ ಮತ್ತು ದಾಕ್ಷಿ ಹಣ್ಣು ಶಿಬಿರದುದ್ದಕ್ಕೂ ನಮ್ಮ ಬಾಯಿ ಚಪಲಕ್ಕೆ ಬಲಿಯಾದವುಗಳು. ಇನ್ನುಳಿದಂತೆ ಹಲವು ಹೊಂದಾಣಿಕೆಯ ಸಮಸ್ಯೆಗಳು ಎದುರಾಗಿದ್ದರೂ ಅವಲ್ಲವನ್ನು ಮರೆಸಿದ್ದು ಜನರ ಪ್ರೀತಿ ವಿಶ್ವಾಸ.
ನಾವು ಉಳಿದುಕೊಂಡ ಐದು ಹಳ್ಳಿಗಳಲ್ಲೂ ನಮ್ಮವರು ಊರಿಗೆ ಬಂದ ಅಪರೂಪದ ಅತಿಥಿಗಳು. ದಿನವಿಡಿ ಪ್ರತಿಯೋಬ್ಬರಿಂದಲೂ ಅವರವರ ಮನೆಗೆ ಊಟಕ್ಕೆ, ನಾಷ್ಟಕ್ಕೆ ಆಹ್ವಾನ. ಕಲಿಯುವ ವಿದ್ಯಾರ್ಥಿಗಳಾದರೂ ನಮ್ಮ ಮಾತುಗಳಿಗೆ ಅಪಾರ ಗೌರವ, ಮನೆ ಮಕ್ಕಳ ಹಾಗೆ ನೋಡಿಕೊಳ್ಳುವ ನಮ್ಮವರಲ್ಲದ ನಮ್ಮ ಅಮ್ಮಂದಿರು, ನಮ್ಮ ಸುತ್ತ ಮುತ್ತ ಓಡಾಡೋ ಮಕ್ಕಳು, ಬೀದಿಯಲ್ಲಿ ಓಡಾಡೋವಾಗ ಕರೆದು ನೀರು ಕುಡಿಸುವ ಹಿರಿಯರು, ಬಿಸಿಲ ಧಗೆ ತಾಳದಾದಾಗ ಪಕ್ಕಕ್ಕೆ ಕರೆದು ನೆರಳಲ್ಲಿ ಸುಧಾರಿಸಿಕೊಳ್ಳಿ ಎಂದು ಸಲಹೆ ನೀಡೊ ಅಜ್ಜಿಯಂದಿರು ಹೀಗೆ ಹೇಳಲಾಗದ ಹಲವು ರೀತಿಯ ವಾತ್ಸಲ್ಯ,ಪ್ರೇಮ ನಾವು ಎದುರಿಸಿದ ಸಮಸ್ಯೆಗಳನ್ನು ಮರೆಸುತ್ತದೆ.
ನಿಜಕ್ಕೂ ಅಪರಿಚಿತರ ವಿಷಯ ಬಿಡಿ, ಪರಿಚಿತರ ಮುಖಕ್ಕೆ ಮುಖಕ್ಕೆ ಕೊಟ್ಟು ಮಾತನಾಡದ ನಮ್ಮ ಮುಂದುವರಿದ ಜಿಲ್ಲೆಯ ಜನ ಬೀದರ್ ನಂತಹ ಹಿಂದುಳಿದ ಜಿಲ್ಲೆಯ ಹಳ್ಳಿಗಳಲ್ಲಿ ಕೆಲವೆ ದಿನಗಳಲ್ಲಿ ಚಿರಪರಿಚಿತ. ಆದರೆ ಅದೆ ಊರ ಜನ ಇಲ್ಲಿ ನಮ್ಮ ದೃಷ್ಟಿಯಲ್ಲಿ ಏನು ಗೊತ್ತಿಲ್ಲದ ಕುರಿಗಳು ಎಂಬುದೆ ವಿಪರ್ಯಾಸ. ನಾವು ಇನ್ನೂ ಎಷ್ಟು ಮುಂದುವರಿಯಬೇಕಾದ ಅಗತ್ಯವಿದೆ ಎಂಬ ಅರಿವು ಮೂಡಿದ್ದು ಇದೆ ಕ್ಷಣದಲ್ಲಿ.
ಈ ಹಳ್ಳಿಗಳಲ್ಲಿನ ಕೆಲ ದಿನಗಳ ಬದುಕು ನಮ್ಮೊಳಗಿನ ಹಲವು ವಿಚಾರಗಳ ಮತ್ತೆ ಅವಲೋಕನ ಮಾಡಿಕೊಳ್ಳಲು ಸಾಧ್ಯವಾಗಿದೆ ಎಂಬುದು ಸತ್ಯದ ವಿಚಾರ. ಇನ್ನೂ ನಮ್ಮವರು ಹಳ್ಳಿಗರಿಗೆ ಹಲವು ವಿಚಾರಗಳನ್ನು ಕಲಿಸಲು ಹೋಗಿದ್ದವರು, ತಾವು ಕಲಿಸ ಹೋದ ವಿಷಯಗಳನ್ನೇ ಮರೆತು ಹೊಸ ಬದುಕನ್ನು ತಮ್ಮ ಜೊತೆ ತಂದಿದ್ದಾರೆ. ಅದೆ ನನಗೆ ಸಂತೋಷ ತಂದ ವಿಚಾರ.
ಹಿಂದುಳಿದ ಜಿಲ್ಲೆಗಳು ಎಂದು ನಾವು ನೀವು ಹಳಿಯುವ ಈ ಭಾಗದ ಎಲ್ಲಾ ಜಿಲ್ಲೆಗಳ ಹಳ್ಳಿಗಳಲ್ಲಿ ಉತ್ತಮ ಜನ ಇದ್ದಾರೆ. ಅವರಲ್ಲಿ ಒಳ್ಳೆಯತನವಿದೆ. ವಾತ್ಸಲ್ಯ, ಪ್ರೀತಿ, ವಿಶ್ವಾಸ ಎಲ್ಲವೂ ಇದೆ. ಅರ್ಥಿಕ, ರಾಜಕೀಯ, ಸಾಮಾಜಿಕ ಬದುಕು ಅಷ್ಟೇನೂ ಸಮಾಧಾನಕರವಾಗಿರಲಿಕ್ಕಿಲ್ಲ. ಆದರೆ ಮನುಷ್ಯನ ಮಾನವೀಯತೆ ಇನ್ನೂ ಜೀವಂತಿಕೆಯಿಂದ ಕೂಡಿದೆ ಎಂಬುದರಲ್ಲಿ ನನಗಂತೂ ಸಂಶಯವಿಲ್ಲ.
-ವಿಘ್ನೇಶ್ ಹೊಳ್ಳ ತೆಕ್ಕಾರು
ಹಿಂದುಳಿದ ಜಿಲ್ಲೆಗಳು ಎಂದು ನಾವು ನೀವು ಹಳಿಯುವ ಈ ಭಾಗದ ಎಲ್ಲಾ ಜಿಲ್ಲೆಗಳ ಹಳ್ಳಿಗಳಲ್ಲಿ ಉತ್ತಮ ಜನ ಇದ್ದಾರೆ. ಅವರಲ್ಲಿ ಒಳ್ಳೆಯತನವಿದೆ. ವಾತ್ಸಲ್ಯ, ಪ್ರೀತಿ, ವಿಶ್ವಾಸ ಎಲ್ಲವೂ ಇದೆ. ಅರ್ಥಿಕ, ರಾಜಕೀಯ, ಸಾಮಾಜಿಕ ಬದುಕು ಅಷ್ಟೇನೂ ಸಮಾಧಾನಕರವಾಗಿರಲಿಕ್ಕಿಲ್ಲ. ಆದರೆ ಮನುಷ್ಯನ ಮಾನವೀಯತೆ ಇನ್ನೂ ಜೀವಂತಿಕೆಯಿಂದ ಕೂಡಿದೆ ಎಂಬುದರಲ್ಲಿ ನನಗಂತೂ ಸಂಶಯವಿಲ್ಲ.
-ವಿಘ್ನೇಶ್ ಹೊಳ್ಳ ತೆಕ್ಕಾರು
No comments:
Post a Comment