Saturday, 24 March 2012

ಮಾಯಾಲೋಕದಲ್ಲಿ ಹುಡುಕಾಟ


 
ಸಿಹಿ ಕನಸೊಂದು ಬಿತ್ತು ರಾತ್ರಿಯಲಿ
ಬೆಳಗಾಗುವುದರಲ್ಲಿ ಮಾಯಾ
ಬಡಬಡಿಸಿ ಎದ್ದು ತಡಕಾಡಿದೆ
ಮನದ ಬಾಗಿಲ ಒಡೆದು 
ಸತ್ತಿತ್ತು ಆ ಕನಸು 
ತನ್ನ ಉದರಕ್ಕೆ ತಾನೇ ಚೂರಿ ಇರಿದು 


ಕತ್ತಲಲ್ಲೊಂದು ಬೆಳಕು ಇತ್ತು
ಬೆಳಗಾಗುವುದರಲ್ಲಿ ಕತ್ತಲೇ ಮಾಯಾ
ಹುಡುಕಿ ಹೊರಟವನಿಗೆ 
ಸಿಗದು ಕತ್ತಲು ಬೆವರೋರೆಸಿಕೊಂಡರೂ
ಕೊನೆಗೂ ಸಿಕ್ಕಿತು ಆ ಅಗಾಧ ಕತ್ತಲು
ಆದರೆ ಬೆಳಕೇ ಮಾಯಾ


ಪ್ರೀತಿ ಎಳೆಯೊಂದಿತ್ತು ಹೃದಯದಲಿ 
ಕಳೆದು ಬಿಟ್ಟೆ ಅನ್ಯಾಯವಾಗಿ 
ಗುಡಿಸಿ ಕಸ ಕಣದಲ್ಲೂ ಹುಡುಕಿದೆ 
ನನ್ನೀ ಹೃದಯದಂಗಳದಿ 
ಹಾಂ! ಸಿಕ್ಕಿತೊಂದು ಮೂಲೆಯಲಿ
ಜೀವವಿರದ ಹೆಣವಾಗಿ 


ನನ್ನೊಳಗೊಂದು ಮೌನವಿತ್ತು
ಮರೆತು ಬಿಟ್ಟೆ ಬದುಕ ಜಂಜಾಟದಲ್ಲಿ 
ಶಾಂತಿ ನೆಮ್ಮದಿಗಾಗಿ ಹಪಹಪಿಸಿದೆ
ರೋಧಿಸಿದೆ,ಕೂಗಾಡಿದೆ ಮೌನಕ್ಕಾಗಿ
ಮೌನ ಪಡೆದುಕೊಂಡೆ 
ನನ್ನ ರೋಧನೆ, ವೇದನೆಗಳ ಅಂತರಾಳದಲ್ಲಿ 


ಸನ್ಯಾಸಿಯಾಗುವ ಅಸೆಯೊಂದಿತ್ತು 
ದೂಡಿಬಿಟ್ಟೆ ಲೋಭ ಕಾಮದ ಹೊಳೆಯಲ್ಲಿ
 ಮತ್ತೆ ಬೇಕೆನಿಸಿತು 
ತಲೆಕೆಟ್ಟು ಹುಡುಕಾಡಿದೆ ನನ್ನೆದೆಯೊಳಗೆ 
ಸಿಕ್ಕಿತು ಹಳೇ ಆಸೆಗಳ ಮೂಟೆಯಲ್ಲಿ
ನಾನಾಗಲೇ ಸಂಸಾರಿಯಾಗಿದ್ದೆ


ನನ್ನೊಳಗೊಂದು ಹುಡುಕಾಟವಿತ್ತು
ಇಂದಿಗೂ ಕೊರೆಯುತ್ತಿದೆ
ಬಡಬಡಿಸುತ್ತೇನೆ, ಹೊಡೆದಾಡುತ್ತೇನೆ 
ಕನವರಿಸುತ್ತೇನೆ ನನಗೇನೋ ಪಡೆಯಲು
ಅಂತ್ಯ ಕಾಣದ ಹುಡುಕಾಟದಲ್ಲಿ 
ಸಿಗುವೆನೇ ನನ್ನೊಳಗೆ ನಾನು.......?      
    

2 comments:

  1. ಮರೀಚಿಕೆಗಳನ್ನು ಬೆನ್ನ ಹತ್ತಿ ಕನಸಿನಲೋಕದಲ್ಲಿ ಹುಡುಕಾಟ! ಎಲ್ಲವನೂ ಮೀರಿ ನಿಲ್ಲಬೇಕೆಂಬ ತುಡಿತವಿದ್ದರೂ, ಕೊನೆಗೆ ಶರಣಾಗುವುದು ಭವಬಂಧನದ ತೆಕ್ಕೆಯೊಳಗೆ. ಹುಡುಕಾಟದ ಪ್ರಯತ್ನ ಮಾತ್ರ ಮುಂದುವರಿಯುತ್ತದೆ ತನ್ನನ್ನು ತಾನು ಸಮರ್ಥಿಸಿ ಎದ್ದು ನಿಲ್ಲುವ ಅಹಮಿನೊಳಗೆ! ನಿಮ್ಮ ಅನುಭವದ ಸಾಲುಗಳಲ್ಲಿನ ಭಾವಗಳನ್ನು ಪರಿಪೂರ್ಣವಾಗಿ ಹುಡುಕಾಡುವಲ್ಲಿ ನಾನು ಕನವರಿಸಿದ್ದೇನೆ ಸರ್. ಕ್ಷಮೆಯಿರಲಿ.

    ReplyDelete
  2. ಕನಸೂ ಆತ್ಮಹತ್ಯೆ ಮಾಡಿಕೊಳ್ಳುವುದೆಂದರೆ ಇದೇ ಇರಬೇಕು.. ಚೆನ್ನಾಗಿದೆ ವಿಜ್ಞೇಶ್ ನಿಮ್ಮ ಅನುಭವದ ಮೂಸೆಯಿಂದೆತ್ತಿದ ಕವಿತೆ.. ಮನದಾಳದ ಭಾವಗಳನ್ನು ಅಕ್ಷರದಲ್ಲಿ ಅದ್ದಿ ತೆಗೆಯುವುದು ಎಂದರೆ ಇದು.. ಚೆಂದ ಬರೆಯುತ್ತೀರಿ.. ಮುಂದುವರೆಸಿ..:)

    ReplyDelete