Tuesday 22 November 2011

ಲೇಖನ - ೧: ಬಡ್ದು ಆಚಾರಿ

                       

ನಮ್ಮ ಮನೆ ಇರುವುದು ಬೆಳ್ತಂಗಡಿ ತಾಲೂಕಿನ ಒಂದು ಸಣ್ಣ ಗ್ರಾಮ ತೆಕ್ಕಾರು. ನಾನು ಹುಟ್ಟಿ ಪದವಿ ಶಿಕ್ಷಣ ಮುಗಿಸುವವರೆಗೂ ಸರಿಯಾಗಿ ಬಸ್ಸುಗಳು ಬಂದು ಹೋದದ್ದಿಲ್ಲ. ಅಂತಹ ಗ್ರಾಮಕ್ಕೆ ಅದರಲ್ಲೂ ನಮ್ಮ ಮನೆಯ ಎಲ್ಲಾ ಮರದ ಕೆಲಸಕ್ಕೆ ನಾನು ಹುಟ್ಟುವುದಕ್ಕೂ ಮೊದಲು ಬರುತಿದ್ದವನೇ ಈ ಬಡ್ದು ಆಚಾರಿ. ಹೆಸರೇಕೆ ಇಷ್ಟು ಕೆಟ್ಟದಾಗಿದೆ ಎಂದುಕೊಳ್ಳಬೇಡಿ..!ಇದು ಆತನಿಗಿದ್ದ ಅನ್ವರ್ಥನಾಮ ಅರ್ಥಾತ್ ಅಡ್ಡ ಹೆಸರು. ಮೂಲ ಹೆಸರು ನಾರಾಯಣ ಆಚಾರಿ, ಆತನ ಕೆಲಸದಲ್ಲಿ ನಯನಾಜೂಕು ಇಲ್ಲದ ಕಾರಣದಿಂದ ತುಳುವಿನ ಬಡ್ದು ನಾರಾಯಣನನ್ನು ಮರೆಮಾಚಿದೆ. ತುಳು ಭಾಷೆಯಲ್ಲಿ ಬಡ್ದು ಎಂದರೆ ಆಲಸ್ಯ ಎಂಬ ಅರ್ಥ ಇರುವುದರಿಂದಲೇ ಜನರ ಬಾಯಲ್ಲಿ ನಾರಾಯಣ ಆಚಾರಿ ಬಡ್ದು ಅಚಾರಿಯಾದ್ದು ಆತನು ಕೆಲಸ ಕೆಡಿಸುತ್ತಿದಷ್ಟೇ ಸಹಜ. ಆತನ ಊರು ಪುಂಜಾಲಕಟ್ಟೆಯ ಪಕ್ಕದ ಯಾವುದೋ ಹಳ್ಳಿಯಂತೆ ಎಂದು ನಾನು ನನ್ನ ತಂದೆಯವರಲ್ಲಿ ಇತ್ತೀಚೆಗಷ್ಟೇ ತಿಳಿದುಕೊಂಡೆ. ನನ್ನ ತಂದೆಯವರೇ ಈ ಅಪರೂಪದ ವ್ಯಕ್ತಿಯ ಕಥೆಯನ್ನು ನನಗೆ ಹೇಳಿದವರು. ಅಷ್ಟು ದೂರದ ಊರಿಂದ ನಮ್ಮೂರಿಗೆ ಕೆಲಸೆದ ನಿಮ್ಮಿತ್ತ ಕಾಲುನಡಿಗೆಯಲ್ಲಿ ಬರುವ ಈ ಮುದುಕ ನಮ್ಮೂರಿನಲ್ಲಿ ಎಲ್ಲೇ ಕೆಲಸವಿದ್ದರೂ ನಮ್ಮ ಮನೆ ಉಳಿದುಕೊಳ್ಳುವ ಅಥಿತಿ ಗೃಹವಿದ್ದಂತೆ ಪುಣ್ಯಾತ್ಮನಿಗೆ. ಧಣಿಗಳೇ ನಾನು ಇವತ್ತು ರಾತ್ರಿ ನಿಮ್ಮ ಮನೆಗೆ ಎಂದು ಹಲ್ಲು ಕಿರಿಯುತ್ತಾ ಬೆಳ್ಳಂಬೆಳಗ್ಗೆ ಪ್ರತ್ಯಕ್ಷವಾಗುವ ಬಡ್ದು ಆಚಾರಿ ಕೆಲಸಮುಗಿಸಿ ಸಂಜೆ ಆರರ ಸುಮಾರಿಗೆ ಮನೆಯ ತಡಮೆ ನುಳಿಕೊಂಡು ಬರುತ್ತಿದ್ದ. ಬಂದವನೇ ಮೊದಲು ಮಾಡುತ್ತಿದ್ದ ಕೆಲಸವೆಂದರೆ ಬಚ್ಚಲುಮನೆಯ ಓಲೆ ತುಂಬಾ ತರಗೆಲೆ ಅಥವಾ ನಮ್ಮ ಮನೆಯಲ್ಲೇ ಕೆಲಸವಾದರೆ ಮರದ ಸಣ್ಣ ಪುಟ್ಟ ಚೂರುಗಳನ್ನೂ ತುರುಕಿಸಿ ಹಂಡೆ ನೀರುಕಾಯಿಸುತ್ತಿದ್ದ. ಬಾಣಂತಿಯರು ಮಿಯುವಂತೆ ಗಂಟೆಗಟ್ಟಲೆ ಮಿಂದು ನನ್ನ ತಂದೆಯವರಿಗೂ ಮಿಲೇ ಅನ್ನೆರೆ..! ಎಂದು ಸತ್ಕರಿಸುತ್ತಿದ್ದ. ಹೀಗೆ ಹೆಚ್ಚಿನ ಸಂಧರ್ಭದಲ್ಲಿ ಆತನ ಕೆಲಸ ಬಡ್ದಾಗಿದ್ದರು ನಮ್ಮ ಮನೆಯ ಕಿಟಕಿ, ಬಾಗಿಲುಗಳನ್ನು ನನ್ನ ತಂದೆಯವರು ಅತನಿಂದಲೇ ಮಾಡಿಸುತ್ತಿದ್ದರು. ಆತನ ಹಂಡೆ ನೀರು ಕಾಯಿಸುವ ಕರ್ಮದಿಂದ ಅಷ್ಟು ಪ್ರಭಾವಿತರಾಗಿದ್ದರು ಎನಿಸುತ್ತದೆ.

ನನ್ನ ಮಾವನವರೊಬ್ಬರು ಹರಿದಾಸರು. ನಾಡಿನಾದ್ಯಂತ ಹರಿಕಥಾ ಪ್ರಸಂಗಗಳನ್ನು ಮಾಡುತ್ತಾ ಹೆಸರುವಾಸಿಯಾದವರು. ಅವರ ಹರಿಕಥಾ ಕಾಲಕ್ಷೇಪ ನಮ್ಮೂರಿನ ಯುವಕರೋಮ್ಮೆ ಹಮ್ಮಿಕೊಂಡಿದ್ದರಂತೆ. ಈ ಸಂಧರ್ಭದಲ್ಲಿ ಬಡ್ದು ಆಚಾರಿ ನಮ್ಮ ಮನೆಯಲ್ಲೇ ಇದ್ದ. ಇದೇ ಸಂಧರ್ಭದಲ್ಲಿ ನಮ್ಮ ಮನೆಗೆ ಆಗಮಿಸಿದ್ದ ಮಾವನವರು ಚಿಕ್ಕವನಾಗಿದ್ದ ನನ್ನಣ್ಣನಲ್ಲಿ ಆಚಾರಿಯ ಹೆಸರೇನು ಎಂದು ಕೇಳಿದಾಗ ಊರವರು ಬಡ್ದು ಆಚಾರಿ ಎಂದು ಹೇಳುವುದನ್ನು ತನ್ನ ಮಸ್ತಕದಲ್ಲಿ ನೆನಪಿಟ್ಟುಕೊಂಡ ನನ್ನಣ್ಣ ಜೋರಾಗಿ ಬಡ್ದು ಆಚಾರಿ ಎಂದು ಹೇಳಿಬಿಟ್ಟನಂತೆ, ಎಂದು ಇತ್ತೀಚಿಗೆ ಭೇಟಿಯಾದ ನನ್ನ ಮಾವನವರು ನಗುತ್ತಾ ನೆನಪಿಸಿಕೊಳ್ಳುತ್ತಿದ್ದರು. 

ನನ್ನಣ್ಣನಂತು ಸಣ್ಣವನಿದ್ದಾಗ ಮಹಾ ಪೋಕರಿಯಂತೆ. ಕೂತಲ್ಲಿ ನಿಂತಲ್ಲಿ ಮಹಾ ಲೂಟಿಯನ್ನು ಮಾಡುತ್ತಾ ನನ್ನಮ್ಮನನ್ನು ಗೋಳು ಹೊಯ್ದುಕೊಳ್ಳುತ್ತಿದ್ದಾಗ ಈ ಬಡ್ದು ಅಚಾರಿಯೇ ನನ್ನಣ್ಣನ ಕೇರ್ ಟೇಕರ್. ಹೇಗೋ ಮಾಡಿ ಸಂತೈಸುತ್ತಿದ್ದ ಬಡ್ದು ಆಚಾರಿ ನನ್ನಮ್ಮನಿಗೆ ಆತನಿಗೆ ಬೇಯಿಸಿ ಹಾಕುವುದು ಕಷ್ಟ ಎನಿಸಿದರು ಮೌನತಾಳಿದ್ದರ ಹಿಂದೆ ಆತನ ಉಪಕಾರದ ಬಗ್ಗೆ ಕೃತಜ್ಞತಾ ಭಾವವೊಂದಿತ್ತು. 

ನಾರಾಯಣ ಆಚಾರಿ ಸ್ವತಃ ಬಡವ, ಮತ್ತು ಶ್ರೀಮಂತಿಗೆ ಆಸೆ ಪಟ್ಟವನ್ನು ಅಲ್ಲ. ತನ್ನ ಕೆಲಸಕ್ಕೆ ಎಷ್ಟು ಸಂಧಬೇಕೋ ಅಷ್ಟನ್ನೇ ತೆಗೆದುಕೊಡು ಕೃತಜ್ಞತೆಯ ನಗು ಬೀರಿ ಹೊರಟುಬಿಡುತ್ತಿದ್ದ. ತನ್ನ ಬದುಕನ್ನು, ತನ್ನನ್ನು ನಂಬಿದವರ ಬದುಕನ್ನು ನಿಭಾಯಿಸಲು ಎಲ್ಲಿಂದ ಎಲ್ಲಿಗೂ ಹೋಗುತ್ತಿದ್ದ ನಾರಾಯಣ ಆಚಾರಿ ಅಪ್ಪಟ ಶ್ರಮ ಜೀವಿ. ಕೆಲಸದಲ್ಲಿ ನಯನಾಜುಕಿನ ಕೊರತೆ ಇದ್ದರು ತನ್ನ ವರ್ತನೆಯಲ್ಲಿ, ಮಾತಿನಲ್ಲಿ ಎಂದು ವಿನಯವಂತಿಕೆಯನ್ನು ಮರೆತವನಲ್ಲ. ಹಲವು ವರ್ಷಗಳಿಂದ ಪತ್ತೆ ಇಲ್ಲದ ಬಡ್ದು ಆಚಾರಿಯನ್ನು ನನ್ನ ತಂದೆ ಪ್ರತಿಭಾರಿಯು ನಮ್ಮ ಮನೆಯಲ್ಲಿ ಕಿಟಕಿ, ಬಾಗಿಲುಗಳ ರಿಪೇರಿಗಳಿಗೆ ಬೇರೆ ಅಚಾರಿಗಳು ಬರುವಾಗ ನೆನಪಿಸಿಕೊಳ್ಳುವುದುಂಟು. ನಾನು ಕಣ್ಣಾರೆ ಆತನನ್ನು ಕಂಡಿರದಿದ್ದರೂ ನನ್ನ ಮುಂದೆ ಈ ಶ್ರೀ ಸಾಮಾನ್ಯನೊಬ್ಬನ ವ್ಯಕ್ತಿತ್ವ ಆದರ್ಶವಾಗಿ ನಿಲ್ಲುತ್ತದೆ. 



 ವಿಘ್ನೇಶ್ ತೆಕ್ಕಾರ್

No comments:

Post a Comment