Tuesday, 22 November 2011

ಲೇಖನ - ೧: ಬಡ್ದು ಆಚಾರಿ

                       

ನಮ್ಮ ಮನೆ ಇರುವುದು ಬೆಳ್ತಂಗಡಿ ತಾಲೂಕಿನ ಒಂದು ಸಣ್ಣ ಗ್ರಾಮ ತೆಕ್ಕಾರು. ನಾನು ಹುಟ್ಟಿ ಪದವಿ ಶಿಕ್ಷಣ ಮುಗಿಸುವವರೆಗೂ ಸರಿಯಾಗಿ ಬಸ್ಸುಗಳು ಬಂದು ಹೋದದ್ದಿಲ್ಲ. ಅಂತಹ ಗ್ರಾಮಕ್ಕೆ ಅದರಲ್ಲೂ ನಮ್ಮ ಮನೆಯ ಎಲ್ಲಾ ಮರದ ಕೆಲಸಕ್ಕೆ ನಾನು ಹುಟ್ಟುವುದಕ್ಕೂ ಮೊದಲು ಬರುತಿದ್ದವನೇ ಈ ಬಡ್ದು ಆಚಾರಿ. ಹೆಸರೇಕೆ ಇಷ್ಟು ಕೆಟ್ಟದಾಗಿದೆ ಎಂದುಕೊಳ್ಳಬೇಡಿ..!ಇದು ಆತನಿಗಿದ್ದ ಅನ್ವರ್ಥನಾಮ ಅರ್ಥಾತ್ ಅಡ್ಡ ಹೆಸರು. ಮೂಲ ಹೆಸರು ನಾರಾಯಣ ಆಚಾರಿ, ಆತನ ಕೆಲಸದಲ್ಲಿ ನಯನಾಜೂಕು ಇಲ್ಲದ ಕಾರಣದಿಂದ ತುಳುವಿನ ಬಡ್ದು ನಾರಾಯಣನನ್ನು ಮರೆಮಾಚಿದೆ. ತುಳು ಭಾಷೆಯಲ್ಲಿ ಬಡ್ದು ಎಂದರೆ ಆಲಸ್ಯ ಎಂಬ ಅರ್ಥ ಇರುವುದರಿಂದಲೇ ಜನರ ಬಾಯಲ್ಲಿ ನಾರಾಯಣ ಆಚಾರಿ ಬಡ್ದು ಅಚಾರಿಯಾದ್ದು ಆತನು ಕೆಲಸ ಕೆಡಿಸುತ್ತಿದಷ್ಟೇ ಸಹಜ. ಆತನ ಊರು ಪುಂಜಾಲಕಟ್ಟೆಯ ಪಕ್ಕದ ಯಾವುದೋ ಹಳ್ಳಿಯಂತೆ ಎಂದು ನಾನು ನನ್ನ ತಂದೆಯವರಲ್ಲಿ ಇತ್ತೀಚೆಗಷ್ಟೇ ತಿಳಿದುಕೊಂಡೆ. ನನ್ನ ತಂದೆಯವರೇ ಈ ಅಪರೂಪದ ವ್ಯಕ್ತಿಯ ಕಥೆಯನ್ನು ನನಗೆ ಹೇಳಿದವರು. ಅಷ್ಟು ದೂರದ ಊರಿಂದ ನಮ್ಮೂರಿಗೆ ಕೆಲಸೆದ ನಿಮ್ಮಿತ್ತ ಕಾಲುನಡಿಗೆಯಲ್ಲಿ ಬರುವ ಈ ಮುದುಕ ನಮ್ಮೂರಿನಲ್ಲಿ ಎಲ್ಲೇ ಕೆಲಸವಿದ್ದರೂ ನಮ್ಮ ಮನೆ ಉಳಿದುಕೊಳ್ಳುವ ಅಥಿತಿ ಗೃಹವಿದ್ದಂತೆ ಪುಣ್ಯಾತ್ಮನಿಗೆ. ಧಣಿಗಳೇ ನಾನು ಇವತ್ತು ರಾತ್ರಿ ನಿಮ್ಮ ಮನೆಗೆ ಎಂದು ಹಲ್ಲು ಕಿರಿಯುತ್ತಾ ಬೆಳ್ಳಂಬೆಳಗ್ಗೆ ಪ್ರತ್ಯಕ್ಷವಾಗುವ ಬಡ್ದು ಆಚಾರಿ ಕೆಲಸಮುಗಿಸಿ ಸಂಜೆ ಆರರ ಸುಮಾರಿಗೆ ಮನೆಯ ತಡಮೆ ನುಳಿಕೊಂಡು ಬರುತ್ತಿದ್ದ. ಬಂದವನೇ ಮೊದಲು ಮಾಡುತ್ತಿದ್ದ ಕೆಲಸವೆಂದರೆ ಬಚ್ಚಲುಮನೆಯ ಓಲೆ ತುಂಬಾ ತರಗೆಲೆ ಅಥವಾ ನಮ್ಮ ಮನೆಯಲ್ಲೇ ಕೆಲಸವಾದರೆ ಮರದ ಸಣ್ಣ ಪುಟ್ಟ ಚೂರುಗಳನ್ನೂ ತುರುಕಿಸಿ ಹಂಡೆ ನೀರುಕಾಯಿಸುತ್ತಿದ್ದ. ಬಾಣಂತಿಯರು ಮಿಯುವಂತೆ ಗಂಟೆಗಟ್ಟಲೆ ಮಿಂದು ನನ್ನ ತಂದೆಯವರಿಗೂ ಮಿಲೇ ಅನ್ನೆರೆ..! ಎಂದು ಸತ್ಕರಿಸುತ್ತಿದ್ದ. ಹೀಗೆ ಹೆಚ್ಚಿನ ಸಂಧರ್ಭದಲ್ಲಿ ಆತನ ಕೆಲಸ ಬಡ್ದಾಗಿದ್ದರು ನಮ್ಮ ಮನೆಯ ಕಿಟಕಿ, ಬಾಗಿಲುಗಳನ್ನು ನನ್ನ ತಂದೆಯವರು ಅತನಿಂದಲೇ ಮಾಡಿಸುತ್ತಿದ್ದರು. ಆತನ ಹಂಡೆ ನೀರು ಕಾಯಿಸುವ ಕರ್ಮದಿಂದ ಅಷ್ಟು ಪ್ರಭಾವಿತರಾಗಿದ್ದರು ಎನಿಸುತ್ತದೆ.

ನನ್ನ ಮಾವನವರೊಬ್ಬರು ಹರಿದಾಸರು. ನಾಡಿನಾದ್ಯಂತ ಹರಿಕಥಾ ಪ್ರಸಂಗಗಳನ್ನು ಮಾಡುತ್ತಾ ಹೆಸರುವಾಸಿಯಾದವರು. ಅವರ ಹರಿಕಥಾ ಕಾಲಕ್ಷೇಪ ನಮ್ಮೂರಿನ ಯುವಕರೋಮ್ಮೆ ಹಮ್ಮಿಕೊಂಡಿದ್ದರಂತೆ. ಈ ಸಂಧರ್ಭದಲ್ಲಿ ಬಡ್ದು ಆಚಾರಿ ನಮ್ಮ ಮನೆಯಲ್ಲೇ ಇದ್ದ. ಇದೇ ಸಂಧರ್ಭದಲ್ಲಿ ನಮ್ಮ ಮನೆಗೆ ಆಗಮಿಸಿದ್ದ ಮಾವನವರು ಚಿಕ್ಕವನಾಗಿದ್ದ ನನ್ನಣ್ಣನಲ್ಲಿ ಆಚಾರಿಯ ಹೆಸರೇನು ಎಂದು ಕೇಳಿದಾಗ ಊರವರು ಬಡ್ದು ಆಚಾರಿ ಎಂದು ಹೇಳುವುದನ್ನು ತನ್ನ ಮಸ್ತಕದಲ್ಲಿ ನೆನಪಿಟ್ಟುಕೊಂಡ ನನ್ನಣ್ಣ ಜೋರಾಗಿ ಬಡ್ದು ಆಚಾರಿ ಎಂದು ಹೇಳಿಬಿಟ್ಟನಂತೆ, ಎಂದು ಇತ್ತೀಚಿಗೆ ಭೇಟಿಯಾದ ನನ್ನ ಮಾವನವರು ನಗುತ್ತಾ ನೆನಪಿಸಿಕೊಳ್ಳುತ್ತಿದ್ದರು. 

ನನ್ನಣ್ಣನಂತು ಸಣ್ಣವನಿದ್ದಾಗ ಮಹಾ ಪೋಕರಿಯಂತೆ. ಕೂತಲ್ಲಿ ನಿಂತಲ್ಲಿ ಮಹಾ ಲೂಟಿಯನ್ನು ಮಾಡುತ್ತಾ ನನ್ನಮ್ಮನನ್ನು ಗೋಳು ಹೊಯ್ದುಕೊಳ್ಳುತ್ತಿದ್ದಾಗ ಈ ಬಡ್ದು ಅಚಾರಿಯೇ ನನ್ನಣ್ಣನ ಕೇರ್ ಟೇಕರ್. ಹೇಗೋ ಮಾಡಿ ಸಂತೈಸುತ್ತಿದ್ದ ಬಡ್ದು ಆಚಾರಿ ನನ್ನಮ್ಮನಿಗೆ ಆತನಿಗೆ ಬೇಯಿಸಿ ಹಾಕುವುದು ಕಷ್ಟ ಎನಿಸಿದರು ಮೌನತಾಳಿದ್ದರ ಹಿಂದೆ ಆತನ ಉಪಕಾರದ ಬಗ್ಗೆ ಕೃತಜ್ಞತಾ ಭಾವವೊಂದಿತ್ತು. 

ನಾರಾಯಣ ಆಚಾರಿ ಸ್ವತಃ ಬಡವ, ಮತ್ತು ಶ್ರೀಮಂತಿಗೆ ಆಸೆ ಪಟ್ಟವನ್ನು ಅಲ್ಲ. ತನ್ನ ಕೆಲಸಕ್ಕೆ ಎಷ್ಟು ಸಂಧಬೇಕೋ ಅಷ್ಟನ್ನೇ ತೆಗೆದುಕೊಡು ಕೃತಜ್ಞತೆಯ ನಗು ಬೀರಿ ಹೊರಟುಬಿಡುತ್ತಿದ್ದ. ತನ್ನ ಬದುಕನ್ನು, ತನ್ನನ್ನು ನಂಬಿದವರ ಬದುಕನ್ನು ನಿಭಾಯಿಸಲು ಎಲ್ಲಿಂದ ಎಲ್ಲಿಗೂ ಹೋಗುತ್ತಿದ್ದ ನಾರಾಯಣ ಆಚಾರಿ ಅಪ್ಪಟ ಶ್ರಮ ಜೀವಿ. ಕೆಲಸದಲ್ಲಿ ನಯನಾಜುಕಿನ ಕೊರತೆ ಇದ್ದರು ತನ್ನ ವರ್ತನೆಯಲ್ಲಿ, ಮಾತಿನಲ್ಲಿ ಎಂದು ವಿನಯವಂತಿಕೆಯನ್ನು ಮರೆತವನಲ್ಲ. ಹಲವು ವರ್ಷಗಳಿಂದ ಪತ್ತೆ ಇಲ್ಲದ ಬಡ್ದು ಆಚಾರಿಯನ್ನು ನನ್ನ ತಂದೆ ಪ್ರತಿಭಾರಿಯು ನಮ್ಮ ಮನೆಯಲ್ಲಿ ಕಿಟಕಿ, ಬಾಗಿಲುಗಳ ರಿಪೇರಿಗಳಿಗೆ ಬೇರೆ ಅಚಾರಿಗಳು ಬರುವಾಗ ನೆನಪಿಸಿಕೊಳ್ಳುವುದುಂಟು. ನಾನು ಕಣ್ಣಾರೆ ಆತನನ್ನು ಕಂಡಿರದಿದ್ದರೂ ನನ್ನ ಮುಂದೆ ಈ ಶ್ರೀ ಸಾಮಾನ್ಯನೊಬ್ಬನ ವ್ಯಕ್ತಿತ್ವ ಆದರ್ಶವಾಗಿ ನಿಲ್ಲುತ್ತದೆ. 



 ವಿಘ್ನೇಶ್ ತೆಕ್ಕಾರ್

Wednesday, 16 November 2011

ಸಂಪತ್ತು

ಹಣ, ಸಂಪತ್ತು, ಬಂಗಾರ
ಕಾರು-ಗೀರು, ಬಂಗಲೆಗಳ
ಬೆನ್ನುಹತ್ತಿ ಹೊರಟವನಿಗೇನು ಸುಖ
ಬದುಕ ಕಡೆಗೊಂದು ದಿನ
ಮಸಣದ ಬೂದಿಯಲ್ಲಿ ಮುಚ್ಚುವುದು
ನಗು ನಗದೆ ಮೆರೆದ ಮುಖ.




Friday, 11 November 2011

ಬದುಕು

ಸ್ಪರ್ಧೆಯೊಂದರಲ್ಲಿ ಶ್ರೀಮಂತ, ಸೋಮಾರಿ, ಸ್ವಾಮಿಜಿ ಮತ್ತು ಬಡವನಿಗೆ ಒಂದು ಪ್ರಶ್ನೆ.

ಬದುಕುವ ಬಗೆಯಾವುದು..?

ಶ್ರೀಮಂತ: ಹಣ, ಸಂಪತ್ತು, ಗೌರವ, ಕೀರ್ತಿಗಳ ಸಂಪಾದನೆ.

ಸೋಮಾರಿ: ಜೀವವಿದ್ದಷ್ಟು ದಿನ ತಿಂದುಂಡು ಮಜಾ ಉಡಾಯಿಸುವುದು.

ಸ್ವಾಮೀಜಿ: ಇಹದ ಪ್ರಲೋಭನೆಯನ್ನು ಮೀರಿ ಪರಮಾತ್ಮನಲ್ಲಿ ಐಕ್ಯ ಹೊಂದುವುದು.

ಬಡವ: ದಿನವೂ ನನ್ನ ಹೆಂಡತಿ ಮಕ್ಕಳಿಗೆ ಊಟ ಹಾಕುವುದು.

ಮಹಾತ್ಮ


ಮಹಾತ್ಮನೋಬ್ಬನಲ್ಲಿ ಸಾಮಾನ್ಯನೊಬ್ಬ,
ಮನುಷ್ಯ ಮಹಾತ್ಮನಾಗುವುದು ಯಾವಾಗ..?
ಮುಗುಳು ನಗುತ್ತಾ ಮಹಾತ್ಮ, ಯಾವತ್ತು ಮನುಷ್ಯ ತಾನು ಮಾಡುವ ಕೆಲಸದಲ್ಲಿ, ಕಾರ್ಯದಲ್ಲಿ ತನ್ನ ಮನಸ್ಸು ಆತ್ಮಗಳನ್ನು ಕಂಡುಕೊಂಡಾಗ.

ನ್ಯಾಯ ಅನ್ಯಾಯ


ಪ್ರತಿಭಟನಾಕಾರನೊಬ್ಬನಲ್ಲಿ ಸಾಮಾನ್ಯನೊಬ್ಬ
ಪ್ರತಿಭಟನೆ ಎಂದರೇನು..?

ಪ್ರತಿಭಟನೆ ಎಂದರೆ ಅನ್ಯಾಯದ ವಿರುದ್ದ ಹೋರಾಟ, ಸತ್ಯಾಗ್ರಹ, ಚಳುವಳಿ, ಉಪವಾಸ ಇತ್ಯಾದಿ....

ಉಪವಾಸದಿಂದ ನಿಮ್ಮ ಉದರಕ್ಕೆ ಮೋಸ ಮಾಡಿದಂತಲ್ಲವೇ..? ನೀವು ಅನ್ಯಾಯಿಯಾದಂತಲ್ಲವೇ..? ಸಾಮಾನ್ಯನ ಮರು ಪ್ರಶ್ನೆ.

ನೋಡಪ್ಪ ನನ್ನ ವಾರಗಳ, ತಿಂಗಳುಗಳ ಉಪವಾಸ, ಹುಟ್ಟುತ್ತಲೇ ಹಸಿವಿಂದ ಬಳಲಿದವರಿಗೆ ಅನ್ನ ಕೊಡುವುದಾದರೆ ನನ್ನ ಪಾಲಿಗೆ ನಾನು ಅನ್ಯಾಯಿಯಾದರೂ ಪರವಾಗಿಲ್ಲ ಎಂದು ಮಾತು ಮುಗಿಸುತ್ತಾನೆ ಪ್ರತಿಭಟನಾಕಾರ.


ಅಸೆ - ದುರಾಸೆ


ಮಿನುಗು ತಾರೆ ಪಡೆಯಲೇಕೆ ಹಂಬಲ 
ಬದುಕೇ ಹೊಳಪಿಲ್ಲದ ಹರಳಾಗಿರುವಾಗ..?
ಮಳೆ ಸುರಿಸುವ ಮುಗಿಲಾಗಲೇಕೆ ಹಂಬಲ
ಮನಸ್ಸು ಬರಡು ಮರುಭೂಮಿಯಾಗಿರುವಾಗ..?



ನದಿಯು ತೊರೆಯ ಸ್ನೇಹ ಮರೆತಿರುವಾಗ
ನದಿಗೆ ಕಡಲಾಗುವ ದುರಾಸೆ...!
ಸೌಗಂಧ ಹೂವ ಋಣ ಮರೆತಿರುವಾಗ
ಸೌಗಂಧಕ್ಕೆ ತನ್ನಿಂದ ತಾನೇ ಹರಡುವಾಸೆ..!

ದೇವರ ಪರಮ ಭಕ್ತ ಎನಿಸಿಕೊಳ್ಳುವಾಸೆ
ಭಯ ಭಕ್ತಿ ಇಲ್ಲದ ನಾ-ಆಸ್ತಿಕನಿಗೆ...!
ಜನಪರ ನಾಯಕನಾಗುವಾಸೆ
ನಿಷ್ಠೆ ಕಾಳಜಿ ಇಲ್ಲದ ಮನುಷ್ಯ ಹುಳುವಿಗೆ...!

ತನ್ನ ಒಲವು ತೊಡಕುಗಳ ಅರಿವಿಲ್ಲದವನಿಗೆ
ಇತರರ ದುಮ್ಮಾನಗಳ ನೀಗಿಸುವಾಸೆ...!
ನಾನು ನಾನಲ್ಲ ಎಂದು ಬದುಕಿದ್ದರೂ
ಸಂಪತ್ತು ನನ್ನದಾಗಿಸುವಾಸೆ...! 

- ವಿಘ್ನೇಶ್ ತೆಕ್ಕಾರ್

Thursday, 10 November 2011

ಸೋಲು, ಬುಡಮೇಲು


ಪಕ್ಷದ ಬುಡವನ್ನೇ ಅಲುಗಾಡಿಸಿದ ನಾಯಕನೊಬ್ಬನಿಂದ ರಾಜ್ಯ ತಿರುಗಿ ಪಕ್ಷಕಟ್ಟುವ ಭರವಸೆ. ಅಮಾಯಕರ ಮೇಲೆ ಸವಾರಿ ಮಾಡುವ ಮತ್ತೊಂದು ಹುಸಿ ಭರವಸೆ. ಇವತ್ತಿನ ಉದಯವಾಣಿಯ ಮುಖಪುಟದಲ್ಲಿ ' ರಾಜ್ಯ ತಿರುಗಿ ಮತ್ತೆ ಪಕ್ಷ ಕಟ್ಟುವೆ' ಎಂಬ ತಲೆಬರಹದೊಂದಿಗೆ ಪ್ರಕಟವಾದ ಸುದ್ದಿಯನ್ನು ಓದಿದಾಗ ನನ್ನ ಮನಸ್ಸಿಗೆ ಬಂದ ಭಾವನೆಗಳಿವು. ೨೪ ದಿನಗಳ ಜೈಲು ವಾಸದಲ್ಲಿರುವಾಗ ಮನೆ ಮನೆಯಲ್ಲೂ ದೀಪ ಹಚ್ಚಿ ಪ್ರಾರ್ಥಿಸಿದ್ದರಿಂದ ತಾನು ಬಿಡುಗಡೆಗೊಂಡೆ ಎಂದು ಹೇಳಿಕೊಂಡು ಕೈ ಜೋಡಿಸುವ ಯೆಡಿಯೂರಪ್ಪನವರೇ ನಮ್ಮ ಮನೆಯಲ್ಲಿ ನಿಮಗಾಗಿ ಯಾವ ದೀಪವನ್ನು ಹಚ್ಚಿಲ್ಲ ಎಂಬುದನ್ನು ಸ್ಪಷ್ಟ ಪಡಿಸುತ್ತೇನೆ. ಯೋಗಿ ಎನಿಸಿಕೊಂಡ ರಾಜಕಾರಣಿಗಳ ಕಾಲು ಹಿಡಿದು, ಅವರಿಗೆ ಸ್ಪಷ್ಟನೆ ನೀಡಿದರೆ ನಿಮ್ಮ ಮುಖಕೆ ಎರಚಿದ ಸೆಗಣಿಯನ್ನು ಒರೆಸುವ ಕೈಂಕರ್ಯವನ್ನಷ್ಟೇ ಮಾಡಬಲ್ಲರವರು. ನಿಮ್ಮ ಭಾಷಣದಲ್ಲಿ ಪದೇ ಪದೇ ಉಪಯೋಗವಾಗುವ ನೈತಿಕತೆ, ಮೌಲ್ಯಗಳಂತಹ ಉತ್ತಮ ಶಬ್ದಗಳ ಅರ್ಥ ಗೊತ್ತಿದ್ದರೆ ಈ ನಾಡಿನ ಸಾಮಾನ್ಯ ಜನರ ಕಾಲಿಗೆ ಬೀಳಿ. ಆಗ ನಾನು, ನನ್ನತಹ ಹಲವಾರು ರಾಜ್ಯದ ಪ್ರಗತಿಯ ಬಗ್ಗೆ ಕಳಕಳಿ ಇರುವಂತಹವರಿಗೆ ಅಲ್ಪಸ್ವಲ್ಪ ಸಮಾಧಾನ ತಂದಿತು. ಜಾಮೀನು ದೊರೆತ ಕೂಡಲೇ ಗೆದ್ದು ಬಿಟ್ಟೆ ಎಂದು ಜನರ ನಂಬಿಕೆ ಗಿಟ್ಟಿಸುವ ಬುಡಮೇಲು ನೀತಿ ಬೇಡ. ಒಂದು ವೇಳೆ ಹಗರಣ ಮುಕ್ತರಾಗಿ ಬಂದು ಮತ್ತೆ ನಾಯಕನಾದರೆ ಓಹೋ ಇದು ಇಂಡಿಯಾ..! ಎಂದು ಕೊಳ್ಳಬೇಕಷ್ಟೇ. ಆದರೆ ನ್ಯಾಯಪರ ಚಿಂತನೆ ಉಳ್ಳ ಜನರ ಮನಸ್ಸಿನಲ್ಲಿ ನಡೆಯುವ ಮತದಾನದಲ್ಲಿ ಯಾವತ್ತೋ ಸೋತಿದ್ದಿರ ಯೆಡ್ಡಿ ದೊರೆಗಳೆ.

Tuesday, 8 November 2011

ಮನುಷ್ಯತ್ವ


ಭಿಕ್ಷುಕರ ಪುಟ್ಟ ಹುಡುಗನೊಬ್ಬ ಬೀದಿಬದಿಯಲ್ಲಿ ಏನೋ ಹುಡುಕುತ್ತಿದ್ದ.
ಕೆಲ ಹೊತ್ತಿನಿಂದ ಗಮನಿಸುತ್ತಿದ್ದ ರಿಕ್ಷಾ ಚಾಲಕನೊಬ್ಬ ಹುಡುಗನ ಬಳಿ ಬಂದು, ಏನೋ ಪುಟ್ಟ ಏನ್ ಕಳೆದುಕೊಂಡಿದ್ದಿಯಾ...? ಎಂದು ಕೇಳತೊಡಗಿದ. 
ಪ್ರತಿಯಾಗಿ ನಾನು ಮನುಷ್ಯತ್ವವನ್ನು ಹುಡುಕುತ್ತಿದ್ದೇನೆ ಎಂಬುದಾಗಿ ಉತ್ತರಿಸಿದ ಪುಟ್ಟ. 
ಲೇ ಹುಚ್ಚು ಹಿಡಿದಿದಿಯೇನೋ ನಿಂಗೆ, ಮನುಷ್ಯತ್ವ ಎಲ್ಲಾದ್ರೂ ಬೀದಿ ಬದಿ ಸಿಗೊಕ್ಕೆ ಏನು ಕಿತ್ತೋಗಿರೋ ಚಪ್ಲಿನಾ..? ಮನುಷ್ಯತ್ವ ಮನುಷ್ಯರಲ್ಲಿ ಇರೊತ್ತೆ ಕಣೋ ಎಂದ ರಿಕ್ಷಾ ಚಾಲಕ. 
ಹೌದಾ! ಮತ್ತೆ ಎರಡು ದಿನದ ಹಿಂದೆ ನನ್ನ ಅಮ್ಮಂಗೆ ಖಾಯಿಲೆ ಜೋರಾಗಿದೆ, ಆಸ್ಪತ್ರೆಗೆ ಕರ್ಕೊಂಡು ಹೋಗ್ಬೇಕು ಅಂದಾಗ ನನ್ನಲ್ಲಿ ದುಡ್ಡು ಇಲಾಂತ ನೀನು ಬರ್ಲಿಲ್ಲ. ಅಮ್ಮ ತೀರ್ ಕೊಂಡಳು. ನೀನು ಮನುಷ್ಯ ತಾನೇ..? ಎಂದು ಪ್ರಶ್ನಿಸಿದಾಗ ಸುಟ್ಟ ಬದನೇಕಾಯಿ ಹಂಗಿತ್ತು ರಿಕ್ಷಾ ಚಾಲಕನ ಮುಖ.

-ವಿಘ್ನೇಶ್ ತೆಕ್ಕಾರ್

ಬಂದ ಯಡಿಯೂರಪ್ಪ .....!


ಅಂತು ಇಂತೂ ಬಂದ ಯಡಿಯೂರಪ್ಪ
ಜೈಲ ಬಂಧನ ದಾಟಿ
ಕುಂತು ಸಾವರಿಸಿಕೊಂಡು
ಹಣ ತಿಂದು ಮತ್ತೆಂದು ಜೈಲ ಭೇಟಿ...
?





Wednesday, 2 November 2011

ತೇಜಸ್ವಿ ಬರಹಗಳಲ್ಲಿ ಮಲೆನಾಡ ಬದುಕು


-ವಿಘ್ನೇಶ್ ತೆಕ್ಕಾರ್
ಮಲೆನಾಡಿನ ತಪ್ಪಲಿನ ತಾಲೂಕಾದ ಬೆಳ್ತಂಗಡಿಯ ಆಸುಪಾಸಿನಲ್ಲಿಯೇ ಹುಟ್ಟಿ ಬೆಳೆದವನಾದರೂ ಅದೇಕೋ ಗೊತ್ತಿಲ್ಲ ಕಾಡು, ಬೆಟ್ಟ, ಗುಡ್ಡ, ಕಣಿವೆ ತಪ್ಪಲುಗಳೆಂದರೆ ಎಲ್ಲಿಲ್ಲದ ಆಸಕ್ತಿ, ಕುತೂಹಲ, ಪ್ರೀತಿ. ದಟ್ಟ ಕಾಡಿನ ಅಗಾಧ ಮೌನ, ಬೃಹದಾಕಾರದ ಮರಗಳ ಟೊಂಗೆಗಳ ನಡುವೆ ಸುಳಿದಾಡುವ ಗಾಳಿಯ ಸುಸ್ವರ, ಆಗೊಮ್ಮೆ ಈಗೊಮ್ಮೆ ಕಣಿವೆಗಳಲ್ಲಿ ಕೇಳಿಬರುವ ನರಿ, ನವಿಲು, ಕೋತಿಗಳ ಕಿರುಚಾಟ- ಕೂಗಾಟಗಳು ನನಗಿಷ್ಟ. ಕಾದಲ್ಲೊಂದು ಗೂಡು ಕಟ್ಟಿ ಬದುಕಬೇಕೆಂಬ ಅತೀವ ಹಂಬಲವಿದ್ದರೂ ನನ್ನದೇ ಅದ ಜವಾಬ್ದಾರಿ, ಕೆಲಸ ಕಾರ್ಯಗಳಿಂದಾಗಿ ನಗರಗಳಲ್ಲೇ ಉಳಿಯಬೇಕಾದ ಪರಿಸ್ಥಿತಿ. ಆದರೂ ವರ್ಷಕ್ಕೊಮ್ಮೆ ಚಾರಣ, ಪಿಕ್ನಿಕ್ ನೆಪದಲ್ಲಿ ಗೆಳೆಯರನ್ನೆಲ್ಲ ಸೇರಿಕೊಂಡು ನಾಗರಿಕ ಪ್ರಪಂಚದಿಂದ ದೂರವಿರುವ ಕಾಂಕ್ರಿಟ್ ಕಟ್ಟಡವಿಲ್ಲದ ಅರಣ್ಯಕೊಮ್ಮೆ ಭೇಟಿಕೊಟ್ಟು ಸುಖಿಸಿಬರುವ ಹವ್ಯಾಸವುಂಟು. ಆದರೂ ನನ್ನ ತೀರದ ಕಾಡಿನ ದಾಹಕ್ಕೆ ನೀರೆಯುತ್ತಿರುವುದು ಕೆ.ಪಿ. ಪೂರ್ಣಚಂದ್ರ ತೇಜಸ್ವಿ, ಕುವೆಂಪು, ನಮ್ಮ ಜಿಲ್ಲೆಯವರೇ ಆಗಿರುವ ಕೆದಂಬಾಡಿ ಜತ್ತಪ್ಪ ರೈ ಮತ್ತು ಕಾಡನ್ನೇ ವಸ್ತುವಾಗಿಟ್ಟುಕೊಂಡು ಬರೆಯುವ ಬರಹಗಾರರ ಅನುಭವಗಳು, ಬೇಟೆಯ ಕಥೆಗಳು, ಕಾದಂಬರಿಗಳು, ರೋಚಕ ಬರಹಗಳು. 

ಮೂಲತಃ ಮಲೆನಾಡಿನವರೆ ಆಗಿದ್ದ ತೇಜಸ್ವಿ ಉನ್ನತ ವ್ಯಾಸಂಗ, ಚಳುವಳಿಗಳನ್ನು, ಸಾಹಿತ್ಯವನ್ನು ಪ್ರಚುರ ಪಡಿಸಿದ್ದು ಕರ್ನಾಟಕದ ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ. ತಂದೆ ಕನ್ನಡ ಕಂಡ ಅಪ್ರತಿಮ ಕವಿ, ಕಾದಂಬರಿಕಾರ ರಾಷ್ಟ್ರಕವಿ ಕುವೆಂಪು. ಸಹಜವಾಗಿಯೇ ಸಾಹಿತ್ಯ ರಕ್ತದಲ್ಲೇ ಬಂದಿತ್ತು. ಸಂಗೀತ ಸಾಹಿತ್ಯದ ಕೃಷಿಯಲ್ಲಿ ನಿರತವಾಗಿದ್ದವರಿಗೆ ಸಾಕಷ್ಟು ಮನ್ನಣೆ ಗೌರವ ನೀಡುತ್ತಿದ್ದ ಮೈಸೂರು ಯಾಕೋ ತೇಜಸ್ವಿಯ ಮನಸ್ಸನ್ನು ಗೆಲ್ಲುವಲ್ಲಿ ಸೋತಿತೋ ಎಂಬಂತೆ ಅಪ್ಪಟ ಮಲೆನಾಡ ಜಿಲ್ಲೆ ಚಿಕ್ಕಮಗಳೂರಿನ ಮೂಡುಗೆರೆಯ ಬಳಿ ಕಾಡನ್ನು ಖರೀದಿಸಿ ಮಡದಿ ರಾಜೇಶ್ವರಿಯವರೊಂದಿಗೆ ಬದುಕುತ್ತಿದ್ದು ಅವರ ಕಾಡು ಪ್ರೀತಿಯನ್ನು ಬಿಂಬಿಸುತ್ತದೆ. ಮಲೆನಾಡಿನ ಮೇಲಿನ ಪ್ರೀತಿ ಅವರ ಬರಹಗಳಿಗೆ ಇನ್ನಷ್ಟು ಬಣ್ಣ ಕಟ್ಟಿಕೊಡುತ್ತಿತು ಎಂದರೆ ತಪ್ಪಾಗಲಾರದು. ಮನೆಯ ಹಿತ್ತಲಲ್ಲೇ ಕಾಡು, ಕಾಡಿನಲ್ಲೊಂದು ಕೆರೆ, ಕೆರೆಯ ನೀರನ್ನು ಕುಡಿಯ ಬರುವ ಗಜ ಪಡೆ, ಚಿಟ್ಟೆ ಹುಲಿ, ಬೈನೆ ಮರ, ಬುಲ್ ಬುಲ್ ಹಕ್ಕಿ, ಹೀಗೆ ಸಂಪೂರ್ಣ ಮಲೆನಾಡು ತಮ್ಮ ಬರಹಕ್ಕೆ ವಸ್ತುವಾಗಿ ಓದುಗರಿಗೆ ರಸದೌತಣವನ್ನು ಬಡಿಸುತ್ತಿದ್ದರು. 

ತೇಜಸ್ವಿಯವರ ಕಾಡಿನ ಕಥೆಗಳು, ಕರ್ವಾಲೋ, ಚಿದಂಬರ ರಹಸ್ಯ, ಮಾಯಾಲೋಕ ಹೀಗೆ ಸಾಲು ಸಾಲು ಕೃತಿಗಳಲ್ಲಿ ಮಲೆನಾಡ ಸೌಂದರ್ಯದ ದಿವ್ಯ ವರ್ಣನೆ ಎಂತಹವರನ್ನು ಸೆಳೆಯುವಂತದ್ದು. ಕಾಡಿನ ಸಣ್ಣ ಪೊದೆಗಳಿಂದ ಹಿಡಿದು ಅಪರೂಪದ ಗಿಡಗಳು, ನದಿ-ತೊರೆ, ಬೆಟ್ಟ-ಗುಡ್ಡ, ಗಾಳಿ-ನೀರು, ಕಾಡು ಹೂವಿನ ಪರಿಮಳ, ಗಗನ ಮುತ್ತಿಕ್ಕುವ ಮರಗಳು, ಮರಗಳ ಸಂದು ಗೊಂದಿನಲ್ಲಿ ಸುಳಿದಾಡುವ ಪಕ್ಷಿಗಳು, ಕಪ್ಪೆ, ನಾಯಿ(ಕಿವಿ), ಉಡ(ಮಾನಿಟರ್), ಹಾವು, ಕಾಡು ಕೋಣ ಕೂಡ ತೇಜಸ್ವಿಯವರ ಕತೆಗಳ ಪ್ರಮುಖ ಪಾತ್ರಗಳಾಗುತ್ತವೆ. ಈ ಪ್ರಾಣಿಗಳಿಲ್ಲದೆ ಕಥೆಯೇ ಅಪೂರ್ಣವಾಗುತ್ತಿತ್ತು ಎಂದು ಅವರ ಕಥೆಗಳನ್ನು ಓದಿದ್ದ ನಂತರ ಅನ್ನಿಸದೇ ಇರುವುದಿಲ್ಲ. ಇದೇ ತೇಜಸ್ವಿ ಓದುಗರನ್ನು ಹಿಡಿದಿಟ್ಟಿರುವ ವಿಶೇಷತೆ. 

ಇನ್ನೂ ತೇಜಸ್ವಿ ಬರಹಗಳಲ್ಲಿ ಬರುವ ಕೆಲಸದ ಪ್ಯಾರ, ಮುದುಕ ಮಾರ, ಸಿದ್ದ, ಬಿರಿಯಾನಿ ಕರಿಯಪ್ಪ, ಸ್ನೇಹಿತ ಕಡಿದಾಳು ಶಾಮಣ್ಣ, ಮತ್ತು ಮುಂತಾದ ಪಾತ್ರಗಳು ಮಲೆನಾಡುಗಳಲ್ಲಿ ಜೀವಿಸುವ ಜನಜೀವನದ ಪ್ರತೀಕವಾಗಿದೆ. ಈ ಪಾತ್ರಗಳು ಕೇವಲ ಕಥೆಗೆ ಪುಷ್ಟಿಕೊಡುವ ಕೆಲಸವನ್ನು ಮಾತ್ರ ಮಾಡದೆ ಮಲೆನಾಡ ಜನರಲ್ಲಿರುವ ಕಾಡು ಮೇಡುಗಳ ಮೇಲಿನ ಅಭಿಮಾನ ಪ್ರೀತಿ, ಬಡವರ ಮೇಲಿನ ಕಾಳಜಿ, ಮೌಧ್ಯತೆ ಎನಿಸಿದರೂ ಪ್ರಕೃತಿಯನ್ನು ರಕ್ಷಿಸುವ ಆಚರಣೆಗಳ ಬಗ್ಗೆ ನಮ್ಮನ್ನು ಪ್ರಜ್ನಾವಂತರನ್ನಾಗಿ ಮಾಡುತ್ತದೆ. 

ಅವರು ಕೇವಲ ಕಾಡನ್ನು ಮಲೆನಾಡನ್ನು ಕಥಾವಸ್ತುವಾಗಿರಿಸಿಕೊಂಡಿರದೆ ಅವುಗಳನ್ನು ಉಳಿಸಬೇಕೆಂಬ ಸಂದೇಶವನ್ನು ತಮ್ಮ ಬರಹಗಳ ಮೂಲಕ ಜನತೆಗೆ ರವ್ವನಿಸುತ್ತಿದ್ದರು. ಹಾರುವ ಓತಿಕ್ಯಾತ ಕೈಗೆ ಸಿಕ್ಕಿದ್ದರೂ ತಪ್ಪಿಸಿಕೊಂಡು ಹಾರುತ್ತ ಪ್ರಕೃತಿಯ ಒಡಲಲ್ಲಿ ಕಣ್ಮರೆಯಾಗುತ್ತಾ ಅವರ ಕರ್ವಾಲೋ ಕಾದಂಬರಿ ಅಂತ್ಯವಾಗುವುದು ಇಂದು ನಶಿಸುತ್ತಿರುವ ಪ್ರಾಣಿ ಜಗತ್ತಿನ ಉಳಿವಿಗಾಗಿ ಕೊಟ್ಟ ಸಂದೇಶವಾಗುತ್ತದೆ. ಜೊತೆಗೆ ತೇಜಸ್ವಿಯವರು ಫೋಟೋಗ್ರಫಿಯನ್ನು ಹವ್ಯಾಸವಾಗಿ ಬೆಳೆಸಿಕೊಂಡು ಹಕ್ಕಿ, ಪಕ್ಕಿ, ಕಾಡುಗಳ ಫೋಟೋ ತೆಗೆಯುತ್ತಾ ಇನ್ನೊಂದು ಆಯಾಮದಲ್ಲಿ ಪ್ರಕೃತಿಯ ರಕ್ಷಣೆಯಲ್ಲಿ ತೊಡಗಿದ್ದರು.

ಹೀಗೆ ತೇಜಸ್ವಿಯವರ ಬರಹಗಳುನನ್ನಷ್ಟೇ ಅಲ್ಲ, ನನ್ನಂತಹ ಯುವ ಸಾಹಿತಿಗಳಿಗೆ, ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ನವ್ಯ ಶೈಲಿಯೊಂದನ್ನು ತೋರಿಸಿಕೊಟ್ಟವರು. ವಾಸ್ತವ ಜಗತ್ತಿನ ನಿರ್ಜಿವ ವಸ್ತುಗಳು ಕೂಡ ಸಾಹಿತ್ಯಕ್ಕೆ ವಸ್ತು ಎಂದು ತೋರಿಸಿಕೊಟ್ಟವರು. ಅವರು ತಮ್ಮ ಕೆಲಸ ಮುಗಿಸಿ ಕೈಲಾಸ ಸೇರಿದ್ದರೂ ನಮ್ಮ ನಿಮ್ಮ ಮನ ಮನದಲ್ಲೂ ದಿನವೂ ಅನುರಣಿಸುತ್ತಿದ್ದಾರೆ. ಪ್ರಾಯಶಃ ನನಗೂ ತೇಜಸ್ವಿಯವರಂತೆ ವಸ್ತುನಿಷ್ಠ ಬರಹಗಾರನಾಗಬೇಕೆಂದು ಆ ದಾರಿಯಲ್ಲೇ ಸಾಗುತ್ತಿದ್ದೇನೆ. ಈ ರೀತಿ ತೇಜಸ್ವಿಯವರು ಇನ್ನೂ ಯಾರ್ ಯಾರಿಗೆ ಮೋಡಿ ಮಾಡಿರುವರೋ ನಾ ಕಾಣೆ.