Wednesday, 2 November 2011

ತೇಜಸ್ವಿ ಬರಹಗಳಲ್ಲಿ ಮಲೆನಾಡ ಬದುಕು


-ವಿಘ್ನೇಶ್ ತೆಕ್ಕಾರ್
ಮಲೆನಾಡಿನ ತಪ್ಪಲಿನ ತಾಲೂಕಾದ ಬೆಳ್ತಂಗಡಿಯ ಆಸುಪಾಸಿನಲ್ಲಿಯೇ ಹುಟ್ಟಿ ಬೆಳೆದವನಾದರೂ ಅದೇಕೋ ಗೊತ್ತಿಲ್ಲ ಕಾಡು, ಬೆಟ್ಟ, ಗುಡ್ಡ, ಕಣಿವೆ ತಪ್ಪಲುಗಳೆಂದರೆ ಎಲ್ಲಿಲ್ಲದ ಆಸಕ್ತಿ, ಕುತೂಹಲ, ಪ್ರೀತಿ. ದಟ್ಟ ಕಾಡಿನ ಅಗಾಧ ಮೌನ, ಬೃಹದಾಕಾರದ ಮರಗಳ ಟೊಂಗೆಗಳ ನಡುವೆ ಸುಳಿದಾಡುವ ಗಾಳಿಯ ಸುಸ್ವರ, ಆಗೊಮ್ಮೆ ಈಗೊಮ್ಮೆ ಕಣಿವೆಗಳಲ್ಲಿ ಕೇಳಿಬರುವ ನರಿ, ನವಿಲು, ಕೋತಿಗಳ ಕಿರುಚಾಟ- ಕೂಗಾಟಗಳು ನನಗಿಷ್ಟ. ಕಾದಲ್ಲೊಂದು ಗೂಡು ಕಟ್ಟಿ ಬದುಕಬೇಕೆಂಬ ಅತೀವ ಹಂಬಲವಿದ್ದರೂ ನನ್ನದೇ ಅದ ಜವಾಬ್ದಾರಿ, ಕೆಲಸ ಕಾರ್ಯಗಳಿಂದಾಗಿ ನಗರಗಳಲ್ಲೇ ಉಳಿಯಬೇಕಾದ ಪರಿಸ್ಥಿತಿ. ಆದರೂ ವರ್ಷಕ್ಕೊಮ್ಮೆ ಚಾರಣ, ಪಿಕ್ನಿಕ್ ನೆಪದಲ್ಲಿ ಗೆಳೆಯರನ್ನೆಲ್ಲ ಸೇರಿಕೊಂಡು ನಾಗರಿಕ ಪ್ರಪಂಚದಿಂದ ದೂರವಿರುವ ಕಾಂಕ್ರಿಟ್ ಕಟ್ಟಡವಿಲ್ಲದ ಅರಣ್ಯಕೊಮ್ಮೆ ಭೇಟಿಕೊಟ್ಟು ಸುಖಿಸಿಬರುವ ಹವ್ಯಾಸವುಂಟು. ಆದರೂ ನನ್ನ ತೀರದ ಕಾಡಿನ ದಾಹಕ್ಕೆ ನೀರೆಯುತ್ತಿರುವುದು ಕೆ.ಪಿ. ಪೂರ್ಣಚಂದ್ರ ತೇಜಸ್ವಿ, ಕುವೆಂಪು, ನಮ್ಮ ಜಿಲ್ಲೆಯವರೇ ಆಗಿರುವ ಕೆದಂಬಾಡಿ ಜತ್ತಪ್ಪ ರೈ ಮತ್ತು ಕಾಡನ್ನೇ ವಸ್ತುವಾಗಿಟ್ಟುಕೊಂಡು ಬರೆಯುವ ಬರಹಗಾರರ ಅನುಭವಗಳು, ಬೇಟೆಯ ಕಥೆಗಳು, ಕಾದಂಬರಿಗಳು, ರೋಚಕ ಬರಹಗಳು. 

ಮೂಲತಃ ಮಲೆನಾಡಿನವರೆ ಆಗಿದ್ದ ತೇಜಸ್ವಿ ಉನ್ನತ ವ್ಯಾಸಂಗ, ಚಳುವಳಿಗಳನ್ನು, ಸಾಹಿತ್ಯವನ್ನು ಪ್ರಚುರ ಪಡಿಸಿದ್ದು ಕರ್ನಾಟಕದ ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ. ತಂದೆ ಕನ್ನಡ ಕಂಡ ಅಪ್ರತಿಮ ಕವಿ, ಕಾದಂಬರಿಕಾರ ರಾಷ್ಟ್ರಕವಿ ಕುವೆಂಪು. ಸಹಜವಾಗಿಯೇ ಸಾಹಿತ್ಯ ರಕ್ತದಲ್ಲೇ ಬಂದಿತ್ತು. ಸಂಗೀತ ಸಾಹಿತ್ಯದ ಕೃಷಿಯಲ್ಲಿ ನಿರತವಾಗಿದ್ದವರಿಗೆ ಸಾಕಷ್ಟು ಮನ್ನಣೆ ಗೌರವ ನೀಡುತ್ತಿದ್ದ ಮೈಸೂರು ಯಾಕೋ ತೇಜಸ್ವಿಯ ಮನಸ್ಸನ್ನು ಗೆಲ್ಲುವಲ್ಲಿ ಸೋತಿತೋ ಎಂಬಂತೆ ಅಪ್ಪಟ ಮಲೆನಾಡ ಜಿಲ್ಲೆ ಚಿಕ್ಕಮಗಳೂರಿನ ಮೂಡುಗೆರೆಯ ಬಳಿ ಕಾಡನ್ನು ಖರೀದಿಸಿ ಮಡದಿ ರಾಜೇಶ್ವರಿಯವರೊಂದಿಗೆ ಬದುಕುತ್ತಿದ್ದು ಅವರ ಕಾಡು ಪ್ರೀತಿಯನ್ನು ಬಿಂಬಿಸುತ್ತದೆ. ಮಲೆನಾಡಿನ ಮೇಲಿನ ಪ್ರೀತಿ ಅವರ ಬರಹಗಳಿಗೆ ಇನ್ನಷ್ಟು ಬಣ್ಣ ಕಟ್ಟಿಕೊಡುತ್ತಿತು ಎಂದರೆ ತಪ್ಪಾಗಲಾರದು. ಮನೆಯ ಹಿತ್ತಲಲ್ಲೇ ಕಾಡು, ಕಾಡಿನಲ್ಲೊಂದು ಕೆರೆ, ಕೆರೆಯ ನೀರನ್ನು ಕುಡಿಯ ಬರುವ ಗಜ ಪಡೆ, ಚಿಟ್ಟೆ ಹುಲಿ, ಬೈನೆ ಮರ, ಬುಲ್ ಬುಲ್ ಹಕ್ಕಿ, ಹೀಗೆ ಸಂಪೂರ್ಣ ಮಲೆನಾಡು ತಮ್ಮ ಬರಹಕ್ಕೆ ವಸ್ತುವಾಗಿ ಓದುಗರಿಗೆ ರಸದೌತಣವನ್ನು ಬಡಿಸುತ್ತಿದ್ದರು. 

ತೇಜಸ್ವಿಯವರ ಕಾಡಿನ ಕಥೆಗಳು, ಕರ್ವಾಲೋ, ಚಿದಂಬರ ರಹಸ್ಯ, ಮಾಯಾಲೋಕ ಹೀಗೆ ಸಾಲು ಸಾಲು ಕೃತಿಗಳಲ್ಲಿ ಮಲೆನಾಡ ಸೌಂದರ್ಯದ ದಿವ್ಯ ವರ್ಣನೆ ಎಂತಹವರನ್ನು ಸೆಳೆಯುವಂತದ್ದು. ಕಾಡಿನ ಸಣ್ಣ ಪೊದೆಗಳಿಂದ ಹಿಡಿದು ಅಪರೂಪದ ಗಿಡಗಳು, ನದಿ-ತೊರೆ, ಬೆಟ್ಟ-ಗುಡ್ಡ, ಗಾಳಿ-ನೀರು, ಕಾಡು ಹೂವಿನ ಪರಿಮಳ, ಗಗನ ಮುತ್ತಿಕ್ಕುವ ಮರಗಳು, ಮರಗಳ ಸಂದು ಗೊಂದಿನಲ್ಲಿ ಸುಳಿದಾಡುವ ಪಕ್ಷಿಗಳು, ಕಪ್ಪೆ, ನಾಯಿ(ಕಿವಿ), ಉಡ(ಮಾನಿಟರ್), ಹಾವು, ಕಾಡು ಕೋಣ ಕೂಡ ತೇಜಸ್ವಿಯವರ ಕತೆಗಳ ಪ್ರಮುಖ ಪಾತ್ರಗಳಾಗುತ್ತವೆ. ಈ ಪ್ರಾಣಿಗಳಿಲ್ಲದೆ ಕಥೆಯೇ ಅಪೂರ್ಣವಾಗುತ್ತಿತ್ತು ಎಂದು ಅವರ ಕಥೆಗಳನ್ನು ಓದಿದ್ದ ನಂತರ ಅನ್ನಿಸದೇ ಇರುವುದಿಲ್ಲ. ಇದೇ ತೇಜಸ್ವಿ ಓದುಗರನ್ನು ಹಿಡಿದಿಟ್ಟಿರುವ ವಿಶೇಷತೆ. 

ಇನ್ನೂ ತೇಜಸ್ವಿ ಬರಹಗಳಲ್ಲಿ ಬರುವ ಕೆಲಸದ ಪ್ಯಾರ, ಮುದುಕ ಮಾರ, ಸಿದ್ದ, ಬಿರಿಯಾನಿ ಕರಿಯಪ್ಪ, ಸ್ನೇಹಿತ ಕಡಿದಾಳು ಶಾಮಣ್ಣ, ಮತ್ತು ಮುಂತಾದ ಪಾತ್ರಗಳು ಮಲೆನಾಡುಗಳಲ್ಲಿ ಜೀವಿಸುವ ಜನಜೀವನದ ಪ್ರತೀಕವಾಗಿದೆ. ಈ ಪಾತ್ರಗಳು ಕೇವಲ ಕಥೆಗೆ ಪುಷ್ಟಿಕೊಡುವ ಕೆಲಸವನ್ನು ಮಾತ್ರ ಮಾಡದೆ ಮಲೆನಾಡ ಜನರಲ್ಲಿರುವ ಕಾಡು ಮೇಡುಗಳ ಮೇಲಿನ ಅಭಿಮಾನ ಪ್ರೀತಿ, ಬಡವರ ಮೇಲಿನ ಕಾಳಜಿ, ಮೌಧ್ಯತೆ ಎನಿಸಿದರೂ ಪ್ರಕೃತಿಯನ್ನು ರಕ್ಷಿಸುವ ಆಚರಣೆಗಳ ಬಗ್ಗೆ ನಮ್ಮನ್ನು ಪ್ರಜ್ನಾವಂತರನ್ನಾಗಿ ಮಾಡುತ್ತದೆ. 

ಅವರು ಕೇವಲ ಕಾಡನ್ನು ಮಲೆನಾಡನ್ನು ಕಥಾವಸ್ತುವಾಗಿರಿಸಿಕೊಂಡಿರದೆ ಅವುಗಳನ್ನು ಉಳಿಸಬೇಕೆಂಬ ಸಂದೇಶವನ್ನು ತಮ್ಮ ಬರಹಗಳ ಮೂಲಕ ಜನತೆಗೆ ರವ್ವನಿಸುತ್ತಿದ್ದರು. ಹಾರುವ ಓತಿಕ್ಯಾತ ಕೈಗೆ ಸಿಕ್ಕಿದ್ದರೂ ತಪ್ಪಿಸಿಕೊಂಡು ಹಾರುತ್ತ ಪ್ರಕೃತಿಯ ಒಡಲಲ್ಲಿ ಕಣ್ಮರೆಯಾಗುತ್ತಾ ಅವರ ಕರ್ವಾಲೋ ಕಾದಂಬರಿ ಅಂತ್ಯವಾಗುವುದು ಇಂದು ನಶಿಸುತ್ತಿರುವ ಪ್ರಾಣಿ ಜಗತ್ತಿನ ಉಳಿವಿಗಾಗಿ ಕೊಟ್ಟ ಸಂದೇಶವಾಗುತ್ತದೆ. ಜೊತೆಗೆ ತೇಜಸ್ವಿಯವರು ಫೋಟೋಗ್ರಫಿಯನ್ನು ಹವ್ಯಾಸವಾಗಿ ಬೆಳೆಸಿಕೊಂಡು ಹಕ್ಕಿ, ಪಕ್ಕಿ, ಕಾಡುಗಳ ಫೋಟೋ ತೆಗೆಯುತ್ತಾ ಇನ್ನೊಂದು ಆಯಾಮದಲ್ಲಿ ಪ್ರಕೃತಿಯ ರಕ್ಷಣೆಯಲ್ಲಿ ತೊಡಗಿದ್ದರು.

ಹೀಗೆ ತೇಜಸ್ವಿಯವರ ಬರಹಗಳುನನ್ನಷ್ಟೇ ಅಲ್ಲ, ನನ್ನಂತಹ ಯುವ ಸಾಹಿತಿಗಳಿಗೆ, ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ನವ್ಯ ಶೈಲಿಯೊಂದನ್ನು ತೋರಿಸಿಕೊಟ್ಟವರು. ವಾಸ್ತವ ಜಗತ್ತಿನ ನಿರ್ಜಿವ ವಸ್ತುಗಳು ಕೂಡ ಸಾಹಿತ್ಯಕ್ಕೆ ವಸ್ತು ಎಂದು ತೋರಿಸಿಕೊಟ್ಟವರು. ಅವರು ತಮ್ಮ ಕೆಲಸ ಮುಗಿಸಿ ಕೈಲಾಸ ಸೇರಿದ್ದರೂ ನಮ್ಮ ನಿಮ್ಮ ಮನ ಮನದಲ್ಲೂ ದಿನವೂ ಅನುರಣಿಸುತ್ತಿದ್ದಾರೆ. ಪ್ರಾಯಶಃ ನನಗೂ ತೇಜಸ್ವಿಯವರಂತೆ ವಸ್ತುನಿಷ್ಠ ಬರಹಗಾರನಾಗಬೇಕೆಂದು ಆ ದಾರಿಯಲ್ಲೇ ಸಾಗುತ್ತಿದ್ದೇನೆ. ಈ ರೀತಿ ತೇಜಸ್ವಿಯವರು ಇನ್ನೂ ಯಾರ್ ಯಾರಿಗೆ ಮೋಡಿ ಮಾಡಿರುವರೋ ನಾ ಕಾಣೆ. 


No comments:

Post a Comment