Thursday 10 November 2011

ಸೋಲು, ಬುಡಮೇಲು


ಪಕ್ಷದ ಬುಡವನ್ನೇ ಅಲುಗಾಡಿಸಿದ ನಾಯಕನೊಬ್ಬನಿಂದ ರಾಜ್ಯ ತಿರುಗಿ ಪಕ್ಷಕಟ್ಟುವ ಭರವಸೆ. ಅಮಾಯಕರ ಮೇಲೆ ಸವಾರಿ ಮಾಡುವ ಮತ್ತೊಂದು ಹುಸಿ ಭರವಸೆ. ಇವತ್ತಿನ ಉದಯವಾಣಿಯ ಮುಖಪುಟದಲ್ಲಿ ' ರಾಜ್ಯ ತಿರುಗಿ ಮತ್ತೆ ಪಕ್ಷ ಕಟ್ಟುವೆ' ಎಂಬ ತಲೆಬರಹದೊಂದಿಗೆ ಪ್ರಕಟವಾದ ಸುದ್ದಿಯನ್ನು ಓದಿದಾಗ ನನ್ನ ಮನಸ್ಸಿಗೆ ಬಂದ ಭಾವನೆಗಳಿವು. ೨೪ ದಿನಗಳ ಜೈಲು ವಾಸದಲ್ಲಿರುವಾಗ ಮನೆ ಮನೆಯಲ್ಲೂ ದೀಪ ಹಚ್ಚಿ ಪ್ರಾರ್ಥಿಸಿದ್ದರಿಂದ ತಾನು ಬಿಡುಗಡೆಗೊಂಡೆ ಎಂದು ಹೇಳಿಕೊಂಡು ಕೈ ಜೋಡಿಸುವ ಯೆಡಿಯೂರಪ್ಪನವರೇ ನಮ್ಮ ಮನೆಯಲ್ಲಿ ನಿಮಗಾಗಿ ಯಾವ ದೀಪವನ್ನು ಹಚ್ಚಿಲ್ಲ ಎಂಬುದನ್ನು ಸ್ಪಷ್ಟ ಪಡಿಸುತ್ತೇನೆ. ಯೋಗಿ ಎನಿಸಿಕೊಂಡ ರಾಜಕಾರಣಿಗಳ ಕಾಲು ಹಿಡಿದು, ಅವರಿಗೆ ಸ್ಪಷ್ಟನೆ ನೀಡಿದರೆ ನಿಮ್ಮ ಮುಖಕೆ ಎರಚಿದ ಸೆಗಣಿಯನ್ನು ಒರೆಸುವ ಕೈಂಕರ್ಯವನ್ನಷ್ಟೇ ಮಾಡಬಲ್ಲರವರು. ನಿಮ್ಮ ಭಾಷಣದಲ್ಲಿ ಪದೇ ಪದೇ ಉಪಯೋಗವಾಗುವ ನೈತಿಕತೆ, ಮೌಲ್ಯಗಳಂತಹ ಉತ್ತಮ ಶಬ್ದಗಳ ಅರ್ಥ ಗೊತ್ತಿದ್ದರೆ ಈ ನಾಡಿನ ಸಾಮಾನ್ಯ ಜನರ ಕಾಲಿಗೆ ಬೀಳಿ. ಆಗ ನಾನು, ನನ್ನತಹ ಹಲವಾರು ರಾಜ್ಯದ ಪ್ರಗತಿಯ ಬಗ್ಗೆ ಕಳಕಳಿ ಇರುವಂತಹವರಿಗೆ ಅಲ್ಪಸ್ವಲ್ಪ ಸಮಾಧಾನ ತಂದಿತು. ಜಾಮೀನು ದೊರೆತ ಕೂಡಲೇ ಗೆದ್ದು ಬಿಟ್ಟೆ ಎಂದು ಜನರ ನಂಬಿಕೆ ಗಿಟ್ಟಿಸುವ ಬುಡಮೇಲು ನೀತಿ ಬೇಡ. ಒಂದು ವೇಳೆ ಹಗರಣ ಮುಕ್ತರಾಗಿ ಬಂದು ಮತ್ತೆ ನಾಯಕನಾದರೆ ಓಹೋ ಇದು ಇಂಡಿಯಾ..! ಎಂದು ಕೊಳ್ಳಬೇಕಷ್ಟೇ. ಆದರೆ ನ್ಯಾಯಪರ ಚಿಂತನೆ ಉಳ್ಳ ಜನರ ಮನಸ್ಸಿನಲ್ಲಿ ನಡೆಯುವ ಮತದಾನದಲ್ಲಿ ಯಾವತ್ತೋ ಸೋತಿದ್ದಿರ ಯೆಡ್ಡಿ ದೊರೆಗಳೆ.

No comments:

Post a Comment